



ಬಳ್ಳಾರಿ, 06 ಜುಲೈ (ಹಿ.ಸ.)
ಆ್ಯಂಕರ್ : ಜಿಲ್ಲೆಯಲ್ಲಿ ಕುಡಿಯುವ ನೀರು ಮತ್ತು ಮಳೆ ಕೊರತೆಯಿರುವ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಕ್ತ ಕಾರ್ಯ ಯೋಜನೆ ರೂಪಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮತ್ತು ಜಿಪಂ ಆಡಳಿತಾಧಿಕಾರಿಯೂ ಆದ ಡಾ.ಕೆ.ವಿ. ತ್ರಿಲೋಕಚಂದ್ರ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಾಮಾನ್ಯ ಸಭೆ ಹಾಗೂ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ (20 ಅಂಶಗಳು ಸೇರಿದಂತೆ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕುಗಳಲ್ಲಿ ಕೃಷಿ ನೀರಾವರಿ ಮತ್ತು ಕುಡಿಯುವ ನೀರಿನ ಬೋರ್ವೆಲ್ಗಳ ಸ್ಥಿತಿಗತಿಯನ್ನು ತಕ್ಷಣವೇ ಪರಿಶೀಲಿಸಬೇಕು. ಕೆಟ್ಟುಹೋಗಿರುವ ಪಂಪ್ಗಳನ್ನು ಹಾಗೂ ವಿದ್ಯುತ್ ಸಂಪರ್ಕದ ಸಮಸ್ಯೆಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ಬೋರ್ವೆಲ್ಗಳ ದುರಸ್ತಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ತಕ್ಷಣವೇ ಸೂಕ್ತ ವರದಿ ನೀಡಿ, ಕೆಲಸ ಆರಂಭಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಲೂಕು ಮಟ್ಟದಲ್ಲಿ ತಹಶೀಲ್ದಾರ್, ಇಒ ಮತ್ತು ಕೃಷಿ, ತೋಟಗಾರಿಕೆ ಹಾಗೂ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಒಟ್ಟಿಗೆ ಕುಳಿತು ಆಯಾ ತಾಲೂಕುಗಳಲ್ಲಿ ಎಷ್ಟು ಕೊಳವೆಬಾವಿಗಳಿವೆ? ಅವುಗಳಲ್ಲಿ ಕುಡಿಯುವ ನೀರಿಗೆ ಎಷ್ಟು, ಕೃಷಿ ನೀರಾವರಿಗೆ ಎಷ್ಟು ಮತ್ತು ಎರಡಕ್ಕೂ ಬಳಕೆಯಾಗುತ್ತಿರುವ ಕೊಳವೆಬಾವಿಗಳು ಎಷ್ಟು ಎಂಬ ಸಂಪೂರ್ಣ ಮಾಹಿತಿ ಸಿದ್ಧಪಡಿಸಬೇಕು. ಮುಂಬರುವ ದಿನಗಳಲ್ಲಿ ಮಳೆಯ ಕೊರತೆಯಿಂದಾಗಿ ಇನ್ನು ಎಷ್ಟು ಕೊಳವೆಬಾವಿಗಳು ಬತ್ತಿ ಹೋಗಬಹುದು ಎಂಬುದನ್ನು ಮುಂಚಿತವಾಗಿಯೇ ಊಹಿಸಿ, ಅದಕ್ಕೆ ತಕ್ಕಂತೆ ಸೂಕ್ತ ಯೋಜನೆಗಳನ್ನು ರೂಪಿಸಬೇಕು ಎಂದರು.
ಜಿಲ್ಲೆಯ ನೀರಾವರಿ ವ್ಯವಸ್ಥೆಯ ಒಟ್ಟು ವಿಸ್ತೀರ್ಣದಲ್ಲಿ 10,000 ಹೆಕ್ಟೇರ್ ಪ್ರದೇಶವು ಕೊಳವೆಬಾವಿ ನೀರಾವರಿ ಆಧಾರಿತವಾಗಿದೆ. ಉಳಿದ 41,141 ಹೆಕ್ಟೇರ್ ಪ್ರದೇಶವು ಸಂಪೂರ್ಣವಾಗಿ ಕಾಲುವೆ ನೀರಾವರಿ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಮಾತನಾಡಿ, ಕೆಲವು ಕೊಳವೆಬಾವಿಗಳು ಕೇವಲ ನೀರಿನ ಕೊರತೆಯಿಂದಷ್ಟೇ ಅಲ್ಲದೆ, ವಿದ್ಯುತ್ ಸಂಪರ್ಕದ ದೋಷ ಅಥವಾ ಪಂಪ್ ಸೆಟ್ ಕೆಟ್ಟುಹೋಗಿರುವುದರಿಂದ ಕೆಲಸ ಮಾಡುತ್ತಿರುವುದಿಲ್ಲ. ಇಂತಹ ಸಮಸ್ಯೆಗಳನ್ನು ಟಾಸ್ಕ್ ಫೋರ್ಸ್ ಮೂಲಕ ತಕ್ಷಣವೇ ಬಗೆಹರಿಸಬೇಕು. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯು ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಇಒಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಹಾಗೂ ಅಗತ್ಯವಿದ್ದಲ್ಲಿ ಬದಲಾವಣೆಗಳನ್ನು ಮಾಡಲು ಮುಕ್ತ ಅವಕಾಶವಿದೆ ಎಂದು ತಿಳಿಸಿದರು.
ಮಳೆ ನೀರನ್ನು ಸಮರ್ಥವಾಗಿ ಬಳಸಿಕೊಳ್ಳಲು ಮತ್ತು ಅಂತರ್ಜಲ ವೃದ್ಧಿಸಲು ಇಂಗು ಗುಂಡಿಗಳನ್ನು ನಿರ್ಮಿಸಬೇಕು. ಈ ಕುರಿತು ಕೃಷಿ ವಿಸ್ತರಣಾಧಿಕಾರಿಗಳು ಸ್ಥಳೀಯ ರೈತ ಮುಖಂಡರು ಮತ್ತು ಸಾರ್ವಜನಿಕರೊಂದಿಗೆ ಸಭೆ ನಡೆಸಿ, ಜಾಗೃತಿ ಮೂಡಿಸಬೇಕು. ಅತಿ ಹೆಚ್ಚು ನೀರು ಬೇಡುವ ಬೆಳೆಗಳ ಬಳಕೆಯನ್ನು ಕಡಿಮೆ ಮಾಡಲು ಮತ್ತು ಲಭ್ಯವಿರುವ ನೀರನ್ನು ಮಿತವಾಗಿ ಬಳಸಲು ರೈತರಿಗೆ ಮಾರ್ಗದರ್ಶನ ನೀಡಬೇಕು. ಈ ಎಲ್ಲಾ ಪ್ರಕ್ರಿಯೆಗಳನ್ನು ಕೇವಲ ಕಾಗದದ ಮೇಲಷ್ಟೇ ಮಾಡದೇ, ವಾಸ್ತವಿಕ ಪರಿಸ್ಥಿತಿಗೆ ಅನುಗುಣವಾಗಿ ವರದಿಯನ್ನು ಸಿದ್ಧಪಡಿಸಿ ಸಲ್ಲಿಸಬೇಕು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 1.5 ಲಕ್ಷ ಜಾನುವಾರುಗಳಿದ್ದು, ಸುಮಾರು 71 ಸಾವಿರ ರೈತರು ಹೈನುಗಾರಿಕೆಯನ್ನೇ ನಂಬಿಕೊ0ಡಿದ್ದಾರೆ. ಜಿಲ್ಲೆಯಲ್ಲಿ ಸದ್ಯಕ್ಕೆ ಮುಂದಿನ 34 ವಾರಗಳಿಗೆ ಆಗುವಷ್ಟು ಮೇವಿನ ದಾಸ್ತಾನು ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಇಲಾಖೆಯು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ರೈತರಿಂದ ಒಟ್ಟು 9,000 ಮೇವಿನ ಮಿನಿಕಿಟ್ಗಳಿಗೆ ಬೇಡಿಕೆ ಬಂದಿದ್ದು, ತ್ವರಿತವಾಗಿ ರೈತರಿಗೆ ಮಿನಿಕಿಟ್ಗಳನ್ನು ಪೂರೈಸಲಾಗುವುದು ಎಂದು ಪಶು ಸಂಗೋಪನೆ ಇಲಾಖಾಧಿಕಾರಿಗಳು ತಿಳಿಸಿದರು.
ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ದಾಖಲಾಗುವ ಮಕ್ಕಳಿಗೆ ವೆಂಟಿಲೇಟರ್ ಸರ್ಕ್ಯೂಟ್ ಹಾಗೂ ಇತರೆ ಸೌಲಭ್ಯಗಳನ್ನು ಸಮರ್ಪಕವಾಗಿ ಇಟ್ಟುಕೊಂಡು ಸೂಕ್ಷ್ಮ ಪರಿಸ್ಥಿತಿಯಲ್ಲಿ ನಿರ್ವಹಣೆ ಮಾಡಬೇಕು. ಈ ಕುರಿತು ಆಸ್ಪತ್ರೆಗಳು ಮತ್ತು ಆರೋಗ್ಯ ಇಲಾಖೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಉತ್ತಮಗೊಳಿಸಲು ಪ್ರತಿ ಪಾಠದ ನಂತರ ವಿದ್ಯಾರ್ಥಿಗಳ ಮೌಲ್ಯಮಾಪನ ನಡೆಸಿ, ಆ ದತ್ತಾಂಶವನ್ನು ತಂತ್ರಾಂಶದಲ್ಲಿ ಅಪ್ಲೋಡ್ ಮಾಡಬೇಕು. ಈ ದತ್ತಾಂಶದ ಸತ್ಯಾಸತ್ಯತೆಯನ್ನು ಖಚಿತಪಡಿಸಲು ಅಧಿಕಾರಿಗಳು ನೂತನವಾದ ತಂತ್ರಾAಶಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಸ್ವತಃ ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳೊಂದಿಗೆ ಸಂವಾದ ನಡೆಸಿ ಮಕ್ಕಳ ಕುಂದು-ಕೊರತೆಗಳನ್ನು ಪರಿಶೀಲಿಸಬೇಕು. ದತ್ತಾಂಶದ ವಿಶ್ವಾಸಾರ್ಹತೆಯನ್ನು ತಳಮಟ್ಟದಲ್ಲಿ ಪರೀಕ್ಷಿಸಲು ಬಿಆರ್ಪಿ, ಸಿಆರ್ಪಿ ಮತ್ತು ವಿಷಯ ಪರಿವೀಕ್ಷಕರನ್ನು ಒಳಗೊಂಡ ವಿಶೇಷ ತಂಡಗಳನ್ನು ರಚಿಸುವಂತೆ ತಿಳಿಸಿದರು.
*ರಕ್ತಹೀನತೆ (ಅನಿಮಿಯಾ) ಮುಕ್ತ ತಾಲೂಕುಗಳಿಗೆ ಆದ್ಯತೆ:*
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅಂಗನವಾಡಿ ಮತ್ತು ಶಾಲಾ ಮಕ್ಕಳಲ್ಲಿ ಕಂಡುಬರುತ್ತಿರುವ ರಕ್ತಹೀನತೆಯ ಪ್ರಮಾಣವನ್ನು ಆತಂಕ ವ್ಯಕ್ತಪಡಿಸಿದ ಉಸ್ತುವಾರಿ ಕಾರ್ಯದರ್ಶಿಯವರು, ಪ್ರಸ್ತುತ ಶೇ.30 ರಿಂದ 40 ಕ್ಕಿಂತ ಹೆಚ್ಚು ಮಕ್ಕಳಲ್ಲಿ ರಕ್ತಹೀನತೆ ಇರುವುದನ್ನು ಆರೋಗ್ಯ ಇಲಾಖೆಯ ವರದಿಯಲ್ಲಿ ಕಂಡುಬAದಿರುತ್ತದೆ. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳ ಆರೋಗ್ಯ ಸುಧಾರಣೆಯೂ ಅಷ್ಟೇ ಮುಖ್ಯವಾಗಿದ್ದು, ಇದರಲ್ಲಿ ಯಾವುದೇ ರೀತಿಯ ನಿರ್ಲಕ್ಷö್ಯ ಮಾಡಬಾರದು ಎಂದು ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡಿದರು.
ಶಾಲಾ/ಪದವಿ ಶಿಕ್ಷಣ ಇಲಾಖಾ ವತಿಯಿಂದ ತಿಂಗಳಿಗೆ ಲಕ್ಷಾಂತರ ರೂ. ವರೆಗೆ ಬಾಡಿಗೆ ಪಾವತಿಸುತ್ತಿರುವ ಶಾಲಾ/ಪದವಿ ವಸತಿ ನಿಲಯಗಳನ್ನು ತಕ್ಷಣವೇ ಸ್ವಂತ ಅಥವಾ ಪರ್ಯಾಯ ಕಟ್ಟಡಗಳಿಗೆ ಸ್ಥಳಾಂತರಿಸಗೊಳಿಸಬೇಕು. ಹೊಸ ಕಟ್ಟಡಗಳ ಕಾಮಗಾರಿ ಪೂರ್ಣಗೊಂಡಿದ್ದರೂ ಸ್ಥಳಾಂತರಗೊಳ್ಳದೆ ವಿಳಂಬ ಮಾಡಬಾರದು ಎಂದು ಸೂಚಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಕೆ.ಎಂ.ಇ.ಆರ್.ಸಿ ಅಡಿಯಲ್ಲಿ ಶಾಲಾ/ಪದವಿ ವಸತಿ ನಿಲಯಗಳ ಮೇಲ್ದರ್ಜೀಕರಣಕ್ಕೆ ಸಂಬ0ಧಿಸಿದಂತೆ ಯೋಜನಾ ವರದಿಗಳನ್ನು ಶೀಘ್ರವಾಗಿ ಸಲ್ಲಿಸಬೇಕು. ಡಿ.ಪಿ.ಆರ್ ತಯಾರಿಸುವಾಗ ಕೇವಲ ಕನ್ಸಲ್ಟೆಂಟ್ಗಳ ಮೇಲೆ ಅವಲಂಬಿತರಾಗದೆ, ಎಂಜಿನಿಯರ್ಗಳು ಸ್ಥಳ ಪರಿಶೀಲನೆ ನಡೆಸಿ ನೈಜ ಅಗತ್ಯತೆಗಳಿಗೆ ತಕ್ಕಂತೆ ವರದಿ ಸಿದ್ಧಪಡಿಸಬೇಕು. ಈ ಪ್ರಕ್ರಿಯೆಯಲ್ಲಿ ವಸತಿ ನಿಲಯದ ವಾರ್ಡನ್ಗಳು ಮತ್ತು ವಿದ್ಯಾರ್ಥಿಗಳ ಸಲಹೆಗಳನ್ನು ಪರಿಗಣಿಸುವುದು ಕಡ್ಡಾಯವಾಗಿದೆ. ಸ್ಮಾರ್ಟ್ ಕಿಚನ್ ಅಥವಾ ಇತರ ಸೌಲಭ್ಯಗಳ ಜೊತೆಗೆ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ಅಗತ್ಯವಿರುವ ಕೊಠಡಿಗಳು ಮತ್ತು ಶೌಚಾಲಯಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಶಾಲಾ/ಪದವಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಸಾಮರ್ಥ್ಯಕ್ಕಿಂತ ಹೆಚ್ಚಿನ ದಾಖಲಾತಿ ಕಂಡುಬAದಿದೆ. ಇದನ್ನು ಸರಿದೂಗಿಸಲು ‘ಡಯಟ್’ ಕಾಲೇಜುಗಳಲ್ಲಿ ಖಾಲಿ ಇರುವ ಕೊಠಡಿಗಳನ್ನು ಕನಿಷ್ಠ ವೆಚ್ಚದಲ್ಲಿ ದುರಸ್ತಿಗೊಳಿಸಿ, ಹೆಚ್ಚುವರಿ ವಸತಿ ವ್ಯವಸ್ಥೆಗೆ ಬಳಸಿಕೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸಬೇಕು. ವಸತಿ ನಿಲಯಗಳ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ಮೂಲಭೂತ ಸೌಕರ್ಯಗಳಿಗೆ ಮೊದಲ ಆದ್ಯತೆ ಇರಬೇಕು.
ಸಾರ್ವಜನಿಕ ಹಣ ದುರ್ಬಳಕೆಯಾಗದಂತೆ ಮತ್ತು ಬಾಡಿಗೆ ಕಟ್ಟಡಗಳ ಮೇಲಿನ ಅನಗತ್ಯ ವೆಚ್ಚವನ್ನು ತಕ್ಷಣವೇ ತಡೆಗಟ್ಟಬೇಕು ಎಂಬುದು ಅವರ ಮನದಾಳದ ಇಚ್ಛೆಯಾಗಿರುತ್ತದೆ.
ಸಭೆಯಲ್ಲಿ ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್ ಬಸವರಾಜ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲಾ ತಾಲ್ಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್