


ಬಳ್ಳಾರಿ, 06 ಜುಲೈ (ಹಿ.ಸ.)
ಆ್ಯಂಕರ್ : ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಣತಿ ಪ್ರಕಾರ ನಡೆಯುತ್ತಿದ್ದು, ಇದನ್ನು ಕೂಡಲೇ ರದ್ದುಪಡಿಸಿ, ಮನೆ ಮನೆಗೆ ಭೇಟಿ ನೀಡದಿರುವ ಬಿಎಲ್ಓಗಳನ್ನು ಕೂಡಲೇ ಬಂಧಿಸಬೇಕು ಎಂದು ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಅವರು ಆಗ್ರಹಿಸಿದ್ದಾರೆ.
ಗೃಹ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ಎಸ್ಐಆರ್ ಪ್ರಕ್ರಿಯೆಯು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಣತಿ ಪ್ರಕಾರ ನಡೆಯುತ್ತಿದ್ದು, ಪಾರದರ್ಶಕವಾಗಿ ನಡೆಯುತ್ತಿಲ್ಲ. ಬಿಎಲ್ಓಗಳು ಶಾದಿಮಹಲ್ಗಳು, ದರ್ಗಾ, ಮದರಾಸಾಗಳಲ್ಲಿ ಎನ್ಯುಮರೇಷನ್ ಅರ್ಜಿಗಳನ್ನು ಭರ್ತಿ ಮಾಡುತ್ತಿರುವುದು ಸಾಬೀತಾಗಿದೆ ಎಂದರು.
ಕೆಲವು ಬಿಎಲ್ಓಗಳು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ಎಸ್ಐಆರ್ನಲ್ಲೂ ಅಕ್ರಮಗಳು ನಡೆಯುತ್ತಿವೆ. ಕಾರಣ ಚುನಾವಣಾ ಆಯೋಗವು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಎಸ್ಐಆರ್ನ ಉದ್ದೇಶವು ವ್ಯರ್ಥವಾಗಲಿದೆ ಎಂದು ಅವರು ಆಗ್ರಹಿಸಿದರು.
ಬಾಂಗ್ಲಾದೇಶಿ ವಲಸಿಗರಿಗೆ ಗುರುತಿನ ಚೀಟಿ ಹಾಗೂ ಸರ್ಕಾರಿ ಸೌಲಭ್ಯಗಳನ್ನು ನೀಡಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿದೆ.
ಕಾಂಗ್ರೆಸ್ ಪಕ್ಷವು ಮತ ಬ್ಯಾಂಕ್ ಮಾಡಿಕೊಳ್ಳಲು ಎಸ್ಐಆರ್ ಉದ್ದೇಶವನ್ನು ಹಾಳು ಮಾಡುತ್ತಿದೆ. 2028 ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿರುವ ಡಿ.ಕೆ. ಶಿವಕುಮಾರ್ ಅವರು, ಎಸ್ಐಆರ್ ದುರ್ಬಳಕೆ ಮಾಡಿಕೊಳ್ಳುತ್ತಿದ್ಧಂತೆ ಇದೆ. 2028 ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಹಗಲುಗನಸು ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಮೊತಕರ್ ಶ್ರೀನಿವಾಸ್, ಮುಖಂಡರಾದ ವೀರಶೇಖರರೆಡ್ಡಿ, ಪಾಲಿಕೆ ಸದಸ್ಯರಾದ ಗುಡಿಗಂಟಿ ಹನುಮಂತ, ಬುಡಾ ಮಾಜಿ ಅಧ್ಯಕ್ಷ ಪಿ. ಪಾಲಣ್ಣ, ಕೆ.ಎಸ್. ಅಶೋಕ್ ಕುಮಾರ್ ಇನ್ನಿತರರು ಈ ಸಂದರ್ಭದಲ್ಲಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್