
ಬೆಂಗಳೂರು, 06 ಜುಲೈ (ಹಿ.ಸ.):
ಆ್ಯಂಕರ್:
ರಾಜ್ಯ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್‌ಗೆ ಬಾಕಿ ಇರುವ ಅನುದಾನವನ್ನು ಬಿಡುಗಡೆ ಮಾಡದೆ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ನಿರ್ಲಕ್ಷಿಸಿದೆ ಎಂದು ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಕಾಂಗ್ರೆಸ್ ಸರ್ಕಾರ ಆರಂಭದಿಂದಲೂ ರಾಜ್ಯದ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ನಿರ್ಲಕ್ಷ್ಯದ ಧೋರಣೆ ಹೊಂದಿದೆ ಎಂದು ಆರೋಪಿಸಿರುವ ಅವರು, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಖಜಾನೆ ಖಾಲಿ ಮಾಡಿದ ಸರ್ಕಾರ ಈಗ ಕನ್ನಡದ ಅಸ್ಮಿತೆಯನ್ನೇ ಕಡೆಗಣಿಸುತ್ತಿದೆ ಎಂದು ಟೀಕಿಸಿದ್ದಾರೆ.
ಕಳೆದ ಒಂದು ಶತಮಾನದಿಂದ ಕನ್ನಡ ಸಾಹಿತ್ಯ, ಭಾಷೆ ಹಾಗೂ ಸಂಸ್ಕೃತಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಕನ್ನಡ ಸಾಹಿತ್ಯ ಪರಿಷತ್ ಇಂದು ಸರ್ಕಾರದ ನಿರ್ಲಕ್ಷ್ಯದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಅವರು ಹೇಳಿದ್ದಾರೆ. 2025–26 ಮತ್ತು 2026–27ನೇ ಆರ್ಥಿಕ ವರ್ಷಗಳಿಗೆ ನೀಡಬೇಕಿದ್ದ ಅನುದಾನವನ್ನು ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಈ ಕಾರಣದಿಂದ ರಾಜ್ಯದ 31 ಜಿಲ್ಲಾ ಘಟಕಗಳು, 6 ಗಡಿನಾಡು ಘಟಕಗಳು ಹಾಗೂ ನೂರಾರು ತಾಲೂಕು ಘಟಕಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ ಎಂದು ಅಶೋಕ ತಿಳಿಸಿದ್ದಾರೆ. ಅಲ್ಲದೆ, ಬಳ್ಳಾರಿಯಲ್ಲಿ ನಡೆಯಬೇಕಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೂ ಸರ್ಕಾರದ ನಿರ್ಲಕ್ಷ್ಯದಿಂದ ವಿಳಂಬವಾಗಿದೆ ಎಂದು ಆರೋಪಿಸಿದ್ದಾರೆ.
ಕುಮಾರಕೃಪಾ ಅತಿಥಿಗೃಹದ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲು ಸರ್ಕಾರದ ಬಳಿ ಹಣವಿದ್ದರೂ, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಅಗತ್ಯ ಅನುದಾನ ನೀಡಲು ಹಣವಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್‌ಗೆ ಬಾಕಿ ಇರುವ ಎಲ್ಲಾ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಿ, ಸ್ಥಗಿತಗೊಂಡಿರುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಮರುಜೀವ ನೀಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಅಶೋಕ ಎಚ್ಚರಿಕೆ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.