ಮಾದಕ ವಸ್ತುಗಳ ಅಕ್ರಮ ತಡೆಗೆ ಸಾರ್ವಜನಿಕರ ಸಹಕಾರ ಕೋರಿದ ಪೊಲೀಸ್ ಇಲಾಖೆ
ಬಾಗಲಕೋಟೆ, 06 ಜುಲೈ (ಹಿ.ಸ.): ಆ್ಯಂಕರ್ : ಸಮಾಜದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಅಕ್ರಮ ಮಾರಾಟ, ಸಾಗಾಟ ಹಾಗೂ ಬಳಕೆಯನ್ನು ಪರಿಣಾಮಕಾರಿಯಾಗಿ ತಡೆಯುವ ಉದ್ದೇಶದಿಂದ ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರ ಸಹಭಾಗಿತ್ವಕ್ಕೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಅಕ್ರಮ ಚಟುವಟಿಕೆಗಳ ಬಗ್
ಮಾದಕ


ಬಾಗಲಕೋಟೆ, 06 ಜುಲೈ (ಹಿ.ಸ.):

ಆ್ಯಂಕರ್ : ಸಮಾಜದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಅಕ್ರಮ ಮಾರಾಟ, ಸಾಗಾಟ ಹಾಗೂ ಬಳಕೆಯನ್ನು ಪರಿಣಾಮಕಾರಿಯಾಗಿ ತಡೆಯುವ ಉದ್ದೇಶದಿಂದ ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರ ಸಹಭಾಗಿತ್ವಕ್ಕೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲು ಜನರು ಹಿಂಜರಿಯದಂತೆ, ಮಾಹಿತಿ ನೀಡುವವರ ಗುರುತು ಸಂಪೂರ್ಣ ಗೌಪ್ಯವಾಗಿರುವ ವಿಶೇಷ QR ಕೋಡ್ ಆಧಾರಿತ ದೂರು ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.

ಸಾಮಾನ್ಯವಾಗಿ ತಮ್ಮ ಸುತ್ತಮುತ್ತ ನಡೆಯುತ್ತಿರುವ ಮಾದಕ ವಸ್ತುಗಳ ಅಕ್ರಮಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲು ಇಚ್ಛಿಸುವ ಅನೇಕ ನಾಗರಿಕರು, ತಮ್ಮ ಹೆಸರು ಬಹಿರಂಗವಾಗಿ ನಂತರ ಅಕ್ರಮದಾರರಿಂದ ಬೆದರಿಕೆ ಅಥವಾ ತೊಂದರೆ ಎದುರಾಗುವ ಭಯದಿಂದ ದೂರು ನೀಡಲು ಹಿಂದೇಟು ಹಾಕುತ್ತಾರೆ. ಇಂತಹ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಈ ನೂತನ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಸಾರ್ವಜನಿಕರಿಗೆ ನೀಡಲಾಗುತ್ತಿರುವ ವಿಶೇಷ QR ಕೋಡ್ ಅನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದರೆ, ನೇರವಾಗಿ ಪೊಲೀಸ್ ಇಲಾಖೆಯ ಆನ್ಲೈನ್ ಪೋರ್ಟಲ್ಗೆ ಸಂಪರ್ಕ ಸಾಧಿಸಬಹುದು. ಅಲ್ಲಿ ತಮ್ಮ ಸುತ್ತಮುತ್ತ ನಡೆಯುತ್ತಿರುವ ಮಾದಕ ವಸ್ತುಗಳ ಮಾರಾಟ, ಸಂಗ್ರಹ, ಸಾಗಾಟ ಅಥವಾ ಇತರೆ ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ಸಲ್ಲಿಸಲು ಅವಕಾಶವಿದೆ.

ಮಾಹಿತಿ ನೀಡುವ ವ್ಯಕ್ತಿಯ ಹೆಸರು ಅಥವಾ ಗುರುತು ಪೊಲೀಸರಿಗೂ ತಿಳಿಯದ ರೀತಿಯಲ್ಲಿ ಈ ವ್ಯವಸ್ಥೆಯನ್ನು ರೂಪಿಸಲಾಗಿದ್ದು, ಸಲ್ಲಿಸಲಾದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಅಗತ್ಯ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

ಈ ಕುರಿತು ಇತ್ತೀಚೆಗೆ ರಬಕವಿ-ಬನಹಟ್ಟಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಮಾದಕ ವ್ಯಸನ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು. ಜನರು ಯಾವುದೇ ಭಯವಿಲ್ಲದೆ ಅಕ್ರಮಗಳ ಬಗ್ಗೆ ಮಾಹಿತಿ ನೀಡಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಪ್ರಸ್ತುತ ಆಯ್ದ ಶಾಲೆಗಳು ಮತ್ತು ಕಾಲೇಜುಗಳ ಗೋಡೆಗಳ ಮೇಲೆ ಈ QR ಕೋಡ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳು, ಬಸ್ ನಿಲ್ದಾಣಗಳು, ಮಾರುಕಟ್ಟೆಗಳು ಸೇರಿದಂತೆ ಜನಸಂದಣಿ ಇರುವ ಪ್ರದೇಶಗಳಲ್ಲಿಯೂ ಈ QR ಕೋಡ್ ಅಳವಡಿಸಿ ಹೆಚ್ಚಿನ ಜನರಿಗೆ ಇದರ ಸೌಲಭ್ಯ ತಲುಪಿಸುವ ಯೋಜನೆ ಇದೆ ಎಂದು ಎಸ್ಪಿ ತಿಳಿಸಿದರು.

ಮಾದಕ ವ್ಯಸನ ಯುವಜನತೆಯ ಭವಿಷ್ಯವನ್ನು ಹಾಳು ಮಾಡುತ್ತಿರುವ ಗಂಭೀರ ಸಾಮಾಜಿಕ ಪಿಡುಗಾಗಿದ್ದು, ಇದನ್ನು ತಡೆಯಲು ಪೊಲೀಸ್ ಇಲಾಖೆ ಮಾತ್ರವಲ್ಲದೆ ಸಾರ್ವಜನಿಕರು, ಪೋಷಕರು, ಶಿಕ್ಷಕರು ಹಾಗೂ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ. ಈ ನೂತನ QR ಕೋಡ್ ವ್ಯವಸ್ಥೆ ಮೂಲಕ ಸಾರ್ವಜನಿಕರು ಸುರಕ್ಷಿತವಾಗಿ ಮಾಹಿತಿ ನೀಡುವುದರಿಂದ ಮಾದಕ ವಸ್ತುಗಳ ಜಾಲವನ್ನು ಮಟ್ಟಹಾಕಲು ಪೊಲೀಸ್ ಇಲಾಖೆಗೆ ಹೆಚ್ಚಿನ ನೆರವಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande