ಪೂರ್ವಜರ ಜ್ಞಾನದ ಭಂಡಾರ ಮುಂದಿನ ಪೀಳಿಗೆಗೆ - ತಾಳೆಗರಿಗಳ ಪಾತ್ರ ಅನನ್ಯ: ಡಾ. ಸುರೇಶ ಬಿ.ಇಟ್ನಾಳ
ಕೊಪ್ಪಳ, 06 ಜುಲೈ (ಹಿ.ಸ.) ಆ್ಯಂಕರ್ : ನಮ್ಮ ಪೂರ್ವಜರು ತಮ್ಮ ಜ್ಞಾನ, ಆಲೋಚನೆಗಳನ್ನು, ಮಹತ್ವದ ದಾಖಲೆಗಳಾಗಬಹುದಾದ ಸಂಗತಿಗಳನ್ನು ತಾಳೆಗರಿಯಲ್ಲಿ ಬರೆದಿಟ್ಟುಕೊಳ್ಳುತ್ತಿದ್ದರು. ಕಾಲಾಂತರದಲ್ಲಿ ಅವರು ಬಿಟ್ಟುಹೋಗಿರುವ ಜ್ಞಾನದ ಭಂಡಾರವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ತಾಳೆಗರಿಗಳ ಪಾತ್ರ ಅ
ಪೂರ್ವಜರ ಜ್ಞಾನದ ಭಂಡಾರ ಮುಂದಿನ ಪೀಳಿಗೆಗೆ - ತಾಳೆಗರಿಗಳ ಪಾತ್ರ ಅನನ್ಯ: ಡಾ. ಸುರೇಶ ಬಿ.ಇಟ್ನಾಳ


ಪೂರ್ವಜರ ಜ್ಞಾನದ ಭಂಡಾರ ಮುಂದಿನ ಪೀಳಿಗೆಗೆ - ತಾಳೆಗರಿಗಳ ಪಾತ್ರ ಅನನ್ಯ: ಡಾ. ಸುರೇಶ ಬಿ.ಇಟ್ನಾಳ


ಪೂರ್ವಜರ ಜ್ಞಾನದ ಭಂಡಾರ ಮುಂದಿನ ಪೀಳಿಗೆಗೆ - ತಾಳೆಗರಿಗಳ ಪಾತ್ರ ಅನನ್ಯ: ಡಾ. ಸುರೇಶ ಬಿ.ಇಟ್ನಾಳ


ಪೂರ್ವಜರ ಜ್ಞಾನದ ಭಂಡಾರ ಮುಂದಿನ ಪೀಳಿಗೆಗೆ - ತಾಳೆಗರಿಗಳ ಪಾತ್ರ ಅನನ್ಯ: ಡಾ. ಸುರೇಶ ಬಿ.ಇಟ್ನಾಳ


ಕೊಪ್ಪಳ, 06 ಜುಲೈ (ಹಿ.ಸ.)

ಆ್ಯಂಕರ್ : ನಮ್ಮ ಪೂರ್ವಜರು ತಮ್ಮ ಜ್ಞಾನ, ಆಲೋಚನೆಗಳನ್ನು, ಮಹತ್ವದ ದಾಖಲೆಗಳಾಗಬಹುದಾದ ಸಂಗತಿಗಳನ್ನು ತಾಳೆಗರಿಯಲ್ಲಿ ಬರೆದಿಟ್ಟುಕೊಳ್ಳುತ್ತಿದ್ದರು. ಕಾಲಾಂತರದಲ್ಲಿ ಅವರು ಬಿಟ್ಟುಹೋಗಿರುವ ಜ್ಞಾನದ ಭಂಡಾರವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ತಾಳೆಗರಿಗಳ ಪಾತ್ರ ಅನನ್ಯವಾದುದು ಎಂದು ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ.ಇಟ್ನಾಳ ಅವರು ಹೇಳಿದರು.

ಕಿಡದಾಳ ರಸ್ತೆಯ ಕಿಮ್ಸ್ ವೈದ್ಯಕೀಯ ಕಾಲೇಜು ಎದುರುಗಡೆ ಇರುವ ಅಗಸ್ತ್ಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೊಪ್ಪಳ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಪ್ರಾಚೀನ ತಾಳೆಗರಿ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಭಾರತವು ಬಹಳಷ್ಟು ಶ್ರೀಮಂತ, ಐತಿಹಾಸಿಕ, ಸಾಂಸ್ಕೃತಿಕ, ವಿಜ್ಞಾನದ ಗತ ವೈಭವವನ್ನು ಹೊಂದಿದೆ. ಈ ಗತ ವೈಭವವು ಹಸ್ತಪ್ರತಿಗಳಲ್ಲಿದೆ. ಸಂಸ್ಕೃತ, ಕನ್ನಡ, ತೆಲುಗು ಹೀಗೆ ವಿವಿಧ ಭಾಷೆಗಳಲ್ಲಿ ಹಸ್ತಪ್ರತಿಗಳಿವೆ. ಪ್ರಾಚೀನ ತಾಳೆಗರಿಗಳು ಕೇವಲ ಎಲೆಗಳಲ್ಲ, ಅವು ನಮ್ಮ ಸಂಸ್ಕೃತಿ, ಕಲೆ, ಸಾಹಿತ್ಯ, ವಿಜ್ಞಾನ ಮತ್ತು ವೈದ್ಯಕೀಯ ಇತಿಹಾಸದ ಜೀವಂತ ಪುರಾವೆಗಳಾಗಿವೆ. ಇವುಗಳ ಮೂಲಕ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಅನಾವರಣ ಮಾಡುವ ಪ್ರಯತ್ನವಾಗುತ್ತಿದೆ ಎಂದರು.

*ಡಿಜಿಟಲೀಕರಣದ ಅಗತ್ಯತೆ:*

ಕಾಲದ ಹೊಡೆತಕ್ಕೆ ಸಿಲುಕಿ ನಶಿಸಿ ಹೋಗುತ್ತಿರುವ ಇಂತಹ ಅಪೂರ್ವ ಹಸ್ತಪ್ರತಿಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸುವುದು ಮತ್ತು ಅವುಗಳನ್ನು ಡಿಜಿಟಲೀಕರಣಗೊಳಿಸಿ ಸಾರ್ವಜನಿಕರ ಹಾಗೂ ಸಂಶೋಧಕರ ಬಳಕೆಗೆ ಮುಕ್ತಗೊಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಸಾರ್ವಜನಿಕರ ಬಳಿ ಅಥವಾ ಖಾಸಗಿ ಸಂಗ್ರಹಗಳಲ್ಲಿ ಇಂತಹ ಅಮೂಲ್ಯವಾದ ತಾಳೆಗರಿಗಳು ಅಥವಾ ಇತರೆ ಪ್ರಾಚೀನ ದಾಖಲೆಗಳಿದ್ದರೆ, ಅವುಗಳನ್ನು ಜಿಲ್ಲಾಡಳಿತ, ಸರ್ಕಾರದ ಪುರಾತತ್ವ ಇಲಾಖೆ ಅಥವಾ ಸಂಬಂಧಪಟ್ಟ ಸಂಸ್ಥೆಗಳಿಗೆ ಹಸ್ತಾಂತರಿಸುವ ಮೂಲಕ ಇತಿಹಾಸ ರಕ್ಷಣೆಗೆ ಕೊಪ್ಪಳ ಜಿಲ್ಲೆಯ ಸಾರ್ವಜನಿಕರು ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕೊಪ್ಪಳ ಜಿಲ್ಲೆಯಲ್ಲಿರುವ ಮಠ ಮಾನ್ಯಗಳಲ್ಲಿ, ರಾಜವಂಶಸ್ಥರಲ್ಲಿ, ಸಾರ್ವಜನಿಕರಲ್ಲಿ, ವೈದ್ಯರಲ್ಲಿ, ಸಾಹಿತಿಗಳಲ್ಲಿ ವಿವಿಧ ಭಾಗಗಳ ಹಸ್ತಪ್ರತಿಗಳಿವೆ. ಈಗಾಗಲೇ ಜಿಲ್ಲಾಡಳಿತದಿಂದ ಎರಡು ಬಾರಿ ಸಭೆ ನಡೆಸಿ, ವಾರ್ತಾ ಇಲಾಖೆಯ ಮೂಲಕ ಜಿಲ್ಲೆಯ ಎಲ್ಲಾ ಮಾಧ್ಯಮಗಳಲ್ಲಿ ಅಗತ್ಯ ಪ್ರಚಾರ ಕೈಗೊಳ್ಳಲಾಗಿದೆ. ಇದರ ಪ್ರತಿಫಲವಾಗಿ ಇಂದು ಈ ಕಾರ್ಯಕ್ರಮ ನಡೆಯುತ್ತಿದೆ. ಆನೆಗೊಂದಿಯ ರಾಜವಂಶಸ್ಥರು, ತಮ್ಮ ಹತ್ತಿರ ಇರುವ ಪುರಾತನ ಹಸ್ತಪ್ರತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ನಮ್ಮ ಇತಿಹಾಸವನ್ನು ನಾವು ಉಳಿಸಿಕೊಂಡರೆ ಮಾತ್ರ ಭವಿಷ್ಯದ ಪೀಳಿಗೆಗೆ ಸೂಕ್ತ ಮಾರ್ಗದರ್ಶನ ನೀಡಲು ಸಾಧ್ಯ.

ಈ ನಿಟ್ಟಿನಲ್ಲಿ ಹಸ್ತಾಂತರಗೊಂಡಿರುವ ತಾಳೆಗರಿಗಳ ಸುರಕ್ಷಿತ ರಕ್ಷಣೆ ಹಾಗೂ ಅಧ್ಯಯನಕ್ಕೆ ಜಿಲ್ಲಾಡಳಿತವು ಸಂಪೂರ್ಣ ಸಹಕಾರ ನೀಡಲಿದೆ. ತಾಳೆಗರಿಗಳನ್ನು ಸಂರಕ್ಷಿಸಿ ಸರ್ಕಾರಕ್ಕೆ ಒಪ್ಪಿಸುವಲ್ಲಿ ಶ್ರಮಿಸಿದ ಎಲ್ಲರಿಗೂ ಈ ಕಾರ್ಯಕ್ರಮದ ಮೂಲಕ ಅಭಿನಂದನೆಯನ್ನು ಸಲ್ಲಿಸಲು ಬಯಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ಕರಡಿ ಸಂಗಣ್ಣ ಅವರು ಮಾತನಾಡಿ, ತಾಳೆಗರಿಗಳು ಕೇವಲ ಹಳೆಯ ಎಲೆಗಳಲ್ಲ, ಅವುಗಳಲ್ಲಿ ನಮ್ಮ ಇತಿಹಾಸ, ವಿಜ್ಞಾನ, ಆಯುರ್ವೇದ, ಜ್ಯೋತಿಷ್ಯ ಮತ್ತು ಸಾಹಿತ್ಯದ ಅಪಾರ ಜ್ಞಾನ ಅಡಗಿದೆ. ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳ ಬಳಿ ಇರುವ ಇಂತಹ ಅಮೂಲ್ಯ ಹಸ್ತಪ್ರತಿಗಳನ್ನು ಜಿಲ್ಲಾಡಳಿತದ ಮೂಲಕ ಸಂಗ್ರಹಿಸಿ, ಸರ್ಕಾರಿ ದಾಖಲೆಗಳಾಗಿ ಸಂರಕ್ಷಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕೆಲಸವಾಗಿದೆ ಎಂದರು.

ಈ ತಾಳೆಗರಿಗಳು ಕಾಲಕ್ರಮೇಣ ನಾಶವಾಗದಂತೆ ತಡೆಯಲು ಆಧುನಿಕ ತಂತ್ರಜ್ಞಾನವನ್ನು ಬಳಸಿ ಇವುಗಳನ್ನು ಡಿಜಿಟಲೀಕರಣ ಮಾಡಬೇಕು. ಇದರಿಂದ ಸಂಶೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಅವರು ಸಲಹೆ ನೀಡಿದರು.

ಜಿಲ್ಲೆಯ ಸಾರ್ವಜನಿಕರು ಅಥವಾ ಮಠ-ಮಾನ್ಯಗಳು ತಮ್ಮ ಬಳಿ ಇರುವ ಇಂತಹ ಪ್ರಾಚೀನ ಹಸ್ತಪ್ರತಿಗಳನ್ನು ಬಚ್ಚಿಟ್ಟುಕೊಳ್ಳದೆ, ಅವುಗಳ ಸುದೀರ್ಘ ಆಯಸ್ಸಿಗಾಗಿ ಸರ್ಕಾರಕ್ಕೆ ಒಪ್ಪಿಸಲು ಮುಂದೆ ಬರಬೇಕು ಎಂದು ಕರಡಿ ಸಂಗಣ್ಣ ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.

ಹೊಸಪೇಟೆ (ಕಮಲಾಪುರ-ಹಂಪಿ) ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕರಾದ ಡಾ. ಆರ್.ಶೆಜೇಶ್ವರ ಅವರು ಮಾತನಾಡಿ, ಕರ್ನಾಟಕದ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಪ್ರಾಚೀನ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ಪುರಾತತ್ವ ಇಲಾಖೆಯ ಶೋಧನೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಇತಿಹಾಸ ಕೇವಲ ರಾಜ-ಮಹಾರಾಜರಿಗೆ ಸೀಮಿತವಾಗಿಲ್ಲ, ಸಾಮಾನ್ಯ ಜನರ ಕೊಡುಗೆಗಳೂ ಇದರಲ್ಲಿ ಅಡಗಿವೆ. ಇಂತಹ ಅಮೂಲ್ಯ ಐತಿಹಾಸಿಕ ಪುರಾವೆಗಳನ್ನು ಸಾರ್ವಜನಿಕರು ಮತ್ತು ಸ್ಥಳೀಯರು ರಕ್ಷಿಸಬೇಕು. ಈ ಹಿನ್ನೆಲೆಯಲ್ಲಿ ಪ್ರಾಚೀನ ತಾಳೆಗರಿ ಹಾಗೂ ಇತರೆ ಹಸ್ತಪ್ರತಿಗಳ ಸಂಗ್ರಹಣೆಯ ಕಾರ್ಯಕವು ಮಹತ್ವದ್ದಾಗಿದೆ ಎಂದು ಹೇಳಿದರು.

ಕೊಪ್ಪಳದ ಅಗಸ್ತ್ಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸಂಸ್ಥೆಯ ಅಧ್ಯಕ್ಷರಾದ ಡಾ. ಸಂಗಮೇಶ ಹಿರೇಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತೀಯ ಜ್ಞಾನ ಪರಂಪರೆಯು ವಿಶ್ವದ ಅತ್ಯಂತ ಪ್ರಾಚೀನ ಹಾಗೂ ಸಮೃದ್ಧ ಪರಂಪರೆಗಳಲ್ಲಿ ಒಂದಾಗಿದ್ದು, ಅದರ ಪ್ರಮುಖ ಆಧಾರಗಳಲ್ಲಿ ಪ್ರಾಚೀನ ಹಸ್ತಪ್ರತಿಗಳು ಪ್ರಮುಖ ಸ್ಥಾನವನ್ನು ಹೊಂದಿವೆ.

ಶತಮಾನಗಳಿಂದ ಗುರು-ಶಿಷ್ಯ ಪರಂಪರೆಯಲ್ಲಿ ಸಂರಕ್ಷಿಸಲ್ಪಟ್ಟಿರುವ ಈ ಹಸ್ತಪ್ರತಿಗಳು ವೈದ್ಯಕೀಯ, ತತ್ವಶಾಸ್ತ್ರ, ಸಂಸ್ಕೃತಿ, ಧರ್ಮ ಹಾಗೂ ವಿಜ್ಞಾನ ಕ್ಷೇತ್ರಗಳ ಅಮೂಲ್ಯ ಜ್ಞಾನ ಸಂಪತ್ತನ್ನು ಒಳಗೊಂಡಿವೆ. ಇಂತಹ ಅಪರೂಪದ ಹಾಗೂ ಐತಿಹಾಸಿಕ ಮಹತ್ವವುಳ್ಳ ಆಯುರ್ವೇದ ಹಸ್ತಪ್ರತಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕೊಪ್ಪಳ ನಗರದ ಅಗಸ್ತ್ಯ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಸಂಗ್ರಹಿಸಿ ಸಂರಕ್ಷಿಸಿದ್ದ ಹಸ್ತಪ್ರತಿಗಳನ್ನು ಜಿಲ್ಲಾಡಳಿತದ ಮೂಲಕ ಸಂಬಂಧಿತ ಪುರಾತತ್ವ ಇಲಾಖೆ, ಪ್ರಾಧಿಕಾರಕ್ಕೆ ಸ್ವಯಂಪ್ರೇರಿತವಾಗಿ ಹಸ್ತಾಂತರಿಸುವ ಮಹತ್ವದ ಕಾರ್ಯವನ್ನು ಕೈಗೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ರಾಮ್ ಎಲ್. ಅರಸಿದ್ದಿ, ಆಯುರ್ವೇದ ವೈದ್ಯ ವಿಜ್ಞಾನಿ ಡಾ. ಚಲಪತಿ, ಕೊಪ್ಪಳದ ಅಗಸ್ತ್ಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸಂಸ್ಥೆಯ ಡಾ. ಲೋಕೇಶ ಟೇಕಲ್, ಡಾ. ಮಹಾಂತಗೌಡ ಬಿರಾದಾರ ಹಾಗೂ ಕನ್ನಡ ಉಪನ್ಯಾಸಕರಾದ ಡಾ. ಸಿದ್ದಲಿಂಗಪ್ಪ ಕೋಟ್ನೆಕಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಉಪನ್ಯಾಸಕರಾದ ಶಿವನಗೌಡ ಪೊಲೀಸಪಾಟೀಲ್ ಅವರು ಕಾರ್ಯಕ್ರಮ ನಿರೂಪಿಸಿದರು. ಡಾ. ಪ್ರಜ್ವಲ್ ಮತ್ತು ಶ್ರೀದೇವಿ ಅವರು ಪ್ರಾರ್ಥನೆ ಗೈದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande