
ಬೆಂಗಳೂರು, 29 ಜುಲೈ (ಹಿ.ಸ.):
ಆ್ಯಂಕರ್:ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಹೊನಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕೆರೆ ಹಾಗೂ ಕೃಷಿ ಭೂಮಿಗಳಲ್ಲಿ ಬೆಳೆ ಹಾನಿಯನ್ನು ಪರಿಶೀಲಿಸಿದರು. ಬಳಿಕ ರೈತರೊಂದಿಗೆ ಮಾತುಕತೆ ನಡೆಸಿ, ಅವರ ಸಮಸ್ಯೆಗಳು ಮತ್ತು ಸರ್ಕಾರದಿಂದ ನಿರೀಕ್ಷಿಸಿರುವ ನೆರವಿನ ಕುರಿತು ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಅವರು, ಬರಗಾಲದಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರವು ಅನಗತ್ಯ ಯೋಜನೆಗಳಿಗೆ ಆದ್ಯತೆ ನೀಡುವುದನ್ನು ಬಿಟ್ಟು ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ, ಕುಡಿಯುವ ನೀರಿನ ವ್ಯವಸ್ಥೆ, ಜಾನುವಾರುಗಳಿಗೆ ಮೇವು ಸೇರಿದಂತೆ ಅಗತ್ಯ ಪರಿಹಾರ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರೈತರ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಬಿಜೆಪಿ ರಾಮನಗರ ಜಿಲ್ಲಾಧ್ಯಕ್ಷ ಆನಂದ್ ಸ್ವಾಮಿ, ರೈತ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.