
ಬೆಂಗಳೂರು, 29 ಜುಲೈ (ಹಿ.ಸ.):
ಆ್ಯಂಕರ್:
ಪ್ರತಿದಿನ 3,500 ಕ್ಯೂಸೆಕ್ನಂತೆ ನಿರಂತರ 15 ದಿನಗಳ ಕಾಲ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕರವೇ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಜಲಾಶಯಗಳಲ್ಲಿ ಕನ್ನಡಿಗರ ಕುಡಿಯಲಿಕ್ಕೂ ಕೂಡ ನೀರಿಲ್ಲದಿರುವ ಈ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವುದು ಅಸಾಧ್ಯ ಹಾಗೂ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಡಿಯಲು ನೀರಿಲ್ಲ, ತಮಿಳುನಾಡಿಗೆ ನೀರು ಕೊಡುವುದರಲ್ಲಿ ಅರ್ಥವಿಲ್ಲ!
ಸರ್ಕಾರದ ಧೋರಣೆಯನ್ನು ತರಾಟೆಗೆ ತೆಗೆದುಕೊಂಡ ನಾರಾಯಣಗೌಡ, ಇವತ್ತು ನಮ್ಮ ಡ್ಯಾಮ್ಗಳಲ್ಲಿ ಉಳಿದುಕೊಂಡಿರುವುದೇ ಕೇವಲ 12 ಟಿಎಂಸಿ ನೀರು. ಅದರಲ್ಲಿಯೂ ನಮ್ಮ ರಾಜಧಾನಿ ಬೆಂಗಳೂರು ನಗರದ ಕುಡಿಯುವ ನೀರಿಗೇ ಪ್ರತಿ ತಿಂಗಳಿಗೆ 3 ಟಿಎಂಸಿ ನೀರು ಬೇಕಾಗುತ್ತದೆ.
ಇಂತಹ ತೀವ್ರ ಸಂಕಷ್ಟದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ವ್ಯವಸಾಯಕ್ಕೆ ನೀರು ಕೊಡಿ ಎನ್ನುವ ಈ ಆದೇಶದಲ್ಲಿ ಯಾವುದೇ ನ್ಯಾಯವಿದೆಯಾ? ಎಂದು ಪ್ರಶ್ನಿಸಿದರು. ಕೆ.ಆರ್.ಎಸ್, ಕಬಿನಿ ಹಾಗೂ ಹಾರಂಗಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಳೆಯಲ್ಲಿ ಸಂಪೂರ್ಣ ಖಾಲಿಯಾಗಿರುವಾಗ ತಮಿಳುನಾಡಿಗೆ ನೀರು ಹರಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
1991ರ ಕಾವೇರಿ ಹೋರಾಟ ಮರುಕಳಿಸದಂತೆ ಎಚ್ಚರವಿರಲಿ:
ಕಾವೇರಿ ಎಂದರೆ ಕನ್ನಡಿಗರ ಜೀವನಾಡಿ, ಇದರೊಂದಿಗೆ ಯಾವುದೇ ಕಾರಣಕ್ಕೂ ರಾಜಕಾರಣ ಮಾಡಬೇಡಿ. ಅಂದು ಕಾವೇರಿ ನೀರು ಪ್ರಾಧಿಕಾರದ ಅನ್ಯಾಯದ ತೀರ್ಪನ್ನು ದಿಕ್ಕರಿಸಿ ಗಟ್ಟಿಯಾಗಿ ನಿಂತ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ರಾಜಕೀಯ ಶಿಷ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಈಗಲಾದರೂ ತಮ್ಮ ಗುರುಗಳ ಅದೇ ಧೀರ ಹಾದಿಯನ್ನೇ ಹಿಡಿಯಬೇಕು. ಅಂದಾಗ ಮಾತ್ರ ಕರ್ನಾಟಕದ ಸಮಗ್ರ ಹಿತ ಕಾಪಾಡಿದಂತಾಗುತ್ತದೆ ಎಂದು ಸಲಹೆ ನೀಡಿದರು.
ಒಂದುವೇಳೆ ಸರ್ಕಾರದ ದೋಷಪೂರಿತ ನಿರ್ಧಾರದಿಂದ ಅನ್ನದಾತ ರೈತರ ಹಿತವನ್ನು ಬಲಿಕೊಟ್ಟು ತಮಿಳುನಾಡಿಗೆ ನೀರು ಬಿಟ್ಟರೆ, 1991ರ ಉಗ್ರ ಕಾವೇರಿ ಹೋರಾಟದಂತೆ ಇಡೀ ರಾಜ್ಯದ ಜನತೆ ಮತ್ತೆ ರಸ್ತೆಗಿಳಿದು ಬುಗಿಲೇಳಬೇಕಾಗುತ್ತದೆ ಎಂದು ಎಚ್ಚರಿಸಿದರು, ಅಂದಿನ ಅವಘಡಗಳು ಮತ್ತು ಸಾವು-ನೋವುಗಳು ಸರ್ಕಾರಕ್ಕೆ ನೆನಪಿರಲಿ ಎಂದರು. ಸರ್ಕಾರದ ಇಂತಹ ಬೇಜವಾಬ್ದಾರಿ ಧೋರಣೆಯಿಂದ ಮುಂದೆ ಸಂಭವಿಸಬಹುದಾದ ಎಲ್ಲಾ ರೀತಿಯ ಅನಾಹುತಗಳಿಗೂ ರಾಜ್ಯ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಸರ್ಕಾರಕ್ಕೆ ಕಡಕ್ ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII