ಪಾದಚಾರಿ ಮಾರ್ಗಗಳಲ್ಲಿನ ಬೆಸ್ಕಾಂ ಅಡೆತಡೆ ತೆರವಿಗೆ ಸಮಗ್ರ ಪಟ್ಟಿ ಸಿದ್ಧಪಡಿಸಿ: ಕೃಷ್ಣ ಬೈರೇಗೌಡ
ಬೆಂಗಳೂರು, 28 ಜುಲೈ (ಹಿ.ಸ.): ಆ್ಯಂಕರ್: ಗ್ರೇಟರ್ ಬೆಂಗಳೂರು (ಜಿಬಿಎ) ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿರುವ ಬೆಸ್ಕಾಂಗೆ ಸಂಬಂಧಿಸಿದ ಎಲ್ಲ ಅಡೆತಡೆಗಳ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸಿ, ಆಗಸ್ಟ್ 1ರಿಂದ ಆರಂಭವಾಗುವ ತ್ಯಾಜ್ಯದಿಂದ ಸ್ವಾತಂತ್ರ್ಯ ವಿಶೇಷ ಅಭಿಯಾನದೊಂದಿಗೆ ಅವುಗಳನ್ನು ಹಂತ ಹಂತವಾಗ
Krishna-Byre


ಬೆಂಗಳೂರು, 28 ಜುಲೈ (ಹಿ.ಸ.):

ಆ್ಯಂಕರ್:

ಗ್ರೇಟರ್ ಬೆಂಗಳೂರು (ಜಿಬಿಎ) ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿರುವ ಬೆಸ್ಕಾಂಗೆ ಸಂಬಂಧಿಸಿದ ಎಲ್ಲ ಅಡೆತಡೆಗಳ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸಿ, ಆಗಸ್ಟ್ 1ರಿಂದ ಆರಂಭವಾಗುವ ತ್ಯಾಜ್ಯದಿಂದ ಸ್ವಾತಂತ್ರ್ಯ ವಿಶೇಷ ಅಭಿಯಾನದೊಂದಿಗೆ ಅವುಗಳನ್ನು ಹಂತ ಹಂತವಾಗಿ ತೆರವುಗೊಳಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಬೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ಪಾದಚಾರಿ ಮಾರ್ಗಗಳಲ್ಲಿರುವ ಬೆಸ್ಕಾಂ ಅಡೆತಡೆಗಳು ಹಾಗೂ ಟ್ರಾನ್ಸ್ಫಾರ್ಮರ್ಗಳ ಸ್ಥಳಾಂತರ ಕುರಿತಂತೆ ನಡೆದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆಯಲಿರುವ ಸ್ವಚ್ಛತಾ ಅಭಿಯಾನದ ವೇಳೆ ಬೆಸ್ಕಾಂಗೆ ಸಂಬಂಧಿಸಿದ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸೂಚಿಸಿದರು.

ನಗರದಾದ್ಯಂತ ಬಳಕೆಯಲ್ಲಿಲ್ಲದ ಹಳೆಯ ಹಾಗೂ ಮುರಿದ ವಿದ್ಯುತ್ ಕಂಬಗಳು, ತಂತಿಗಳು ಮತ್ತು ಟ್ರಾನ್ಸ್ಫಾರ್ಮರ್ಗಳಿಗೆ ಅಳವಡಿಸಿರುವ ಕಬ್ಬಿಣದ ರಾಡ್ಗಳು ಸಾರ್ವಜನಿಕರ ಸುರಕ್ಷತೆಗೆ ಅಪಾಯಕಾರಿಯಾಗಿವೆ. ಇಂತಹ ಎಲ್ಲ ಅಡೆತಡೆಗಳನ್ನು ಕೂಡಲೇ ತೆರವುಗೊಳಿಸಿ, ಪಾದಚಾರಿ ಮಾರ್ಗಗಳಲ್ಲಿ ಅಡ್ಡಿಯಾಗಿರುವ ಟ್ರಾನ್ಸ್ಫಾರ್ಮರ್ಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಅವರು ಹೇಳಿದರು.

ಈ ಸಮಸ್ಯೆಗಳಿಗೆ ಅಲ್ಪಾವಧಿ ಹಾಗೂ ದೀರ್ಘಾವಧಿಯ ಕಾರ್ಯಯೋಜನೆ ರೂಪಿಸಿ, ಬೆಸ್ಕಾಂ ಮೂಲಸೌಕರ್ಯಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಕೆಲವೆಡೆ ಪಾದಚಾರಿ ಮಾರ್ಗಗಳ ಮಧ್ಯಭಾಗದಲ್ಲಿರುವ ವಿದ್ಯುತ್ ಕಂಬಗಳನ್ನು ಆಧರಿಸಿಕೊಂಡು ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿರುವ ಪ್ರಕರಣಗಳು ಕಂಡುಬಂದಿವೆ.

ಅಲ್ಲದೆ, ಖಾಸಗಿ ಅಪಾರ್ಟ್ಮೆಂಟ್ಗಳು ಸಾರ್ವಜನಿಕ ಪಾದಚಾರಿ ಮಾರ್ಗಗಳಲ್ಲಿ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಿರುವುದು ಗಮನಕ್ಕೆ ಬಂದಿದೆ. ಇಂತಹ ಎಲ್ಲ ಟ್ರಾನ್ಸ್ಫಾರ್ಮರ್ಗಳ ಪಟ್ಟಿಯನ್ನು ಸಿದ್ಧಪಡಿಸಿ, ಅವುಗಳನ್ನು ಸಂಬಂಧಪಟ್ಟವರ ಸ್ವಂತ ಆವರಣದಲ್ಲಿಯೇ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಬೇಕು ಎಂದು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande