ಬೆಂಗಳೂರು: ಖಾಲಿ ನಿವೇಶನಗಳಲ್ಲಿ ಸ್ವಚ್ಚತೆ ಕಾಪಾಡಲು ಜಿಬಿಎ ಸೂಚನೆ
ಬೆಂಗಳೂರು, 28 ಜುಲೈ (ಹಿ.ಸ.): ಆ್ಯಂಕರ್: ಸಿಲಿಕಾನ್ ಸಿಟಿ ಬೆಂಗಳೂರನ್ನು ಸುಂದರ ನಗರವನ್ನಾಗಿ ರೂಪುಗೊಳಿಸುವ ಮಹತ್ವದ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಆಗಸ್ಟ್-2026 ಮಾಹೆಯಲ್ಲಿ ತ್ಯಾಜ್ಯದಿಂದ ಸ್ವಾತಂತ್ರ್ಯ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು,
ಸಂದರ್ಭಿಕ ಚಿತ್ರ


ಬೆಂಗಳೂರು, 28 ಜುಲೈ (ಹಿ.ಸ.):

ಆ್ಯಂಕರ್:

ಸಿಲಿಕಾನ್ ಸಿಟಿ ಬೆಂಗಳೂರನ್ನು ಸುಂದರ ನಗರವನ್ನಾಗಿ ರೂಪುಗೊಳಿಸುವ ಮಹತ್ವದ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಆಗಸ್ಟ್-2026 ಮಾಹೆಯಲ್ಲಿ ತ್ಯಾಜ್ಯದಿಂದ ಸ್ವಾತಂತ್ರ್ಯ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ನಗರದಾದ್ಯಂತ ಕಟ್ಟುನಿಟ್ಟಿನ ಕ್ರಮಗಳಿಗೆ ಸಿದ್ಧತೆ ನಡೆಸಲಾಗಿದೆ.

ಈ ಕುರಿತು ಜಿಬಿಎ ಮುಖ್ಯ ಆಯುಕ್ತ

ಮಹೇಶ್ವರ್ ರಾವ್ ಅವರು ಆದೇಶ ಹೊರಡಿಸಿದ್ದು, ಖಾಲಿ ನಿವೇಶನಗಳ ಮಾಲೀಕರು ತಮ್ಮ ಜಾಗವನ್ನು ತಾವೇ ಸ್ವಚ್ಛವಾಗಿಟ್ಟುಕೊಳ್ಳುವುದು ಕಡ್ಡಾಯ ಎಂದು ಎಚ್ಚರಿಸಿದ್ದಾರೆ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಕನಿಷ್ಠ ₹25,000 ದಿಂದ ಆರಂಭವಾಗಿ ₹1,00,000 ವರೆಗೆ ಭಾರಿ ದಂಡ ಬೀಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಆಗಸ್ಟ್ 15ರ ಗಡುವು: ನಗರದಲ್ಲಿನ ಎಲ್ಲಾ ಖಾಲಿ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳಲ್ಲಿ ಶೇಖರಣೆಯಾಗಿರುವ ಹಳೆಯ ತ್ಯಾಜ್ಯ ಹಾಗೂ ಡೆಬ್ರಿಸ್ (ಕಟ್ಟಡ ಭಗ್ನಾವಶೇಷ) ಅನ್ನು ದಿನಾಂಕ 15.08.2026ರೊಳಗಾಗಿ ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು.

ದಂಡದ ಅಸ್ತ್ರ & ತೆರಿಗೆ ವಸೂಲಿ: ನಿಗದಿತ ದಿನಾಂಕದೊಳಗೆ ಸ್ವಚ್ಛಗೊಳಿಸದಿದ್ದರೆ, ನಗರಪಾಲಿಕೆ ಸಿಬ್ಬಂದಿಯೇ ತೆರವುಗೊಳಿಸಿ ತಗುಲುವ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ಸೇರಿಸಿ ವಸೂಲಿ ಮಾಡಲಾಗುತ್ತದೆ. ಅಲ್ಲದೆ, ಕರ್ನಾಟಕ ಭೂಕಂದಾಯ ಕಾಯ್ದೆ-1964ರ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು. ನಿಯಮ ಉಲ್ಲಂಘಿಸಿದರೆ ಮೊದಲ ಬಾರಿಗೆ ರೂ. 25,000 ಹಾಗೂ ನಂತರದ ಉಲ್ಲಂಘನೆಗಳಿಗೆ ರೂ. 50,000 ದಿಂದ ರೂ. 1,00,000 ವರೆಗೆ ದಂಡ ವಿಧಿಸಲಾಗುತ್ತದೆ.

ಸಾರ್ವಜನಿಕರೇ ಕಾವಲುಗಾರರು

ನಿವೇಶನಗಳು ಸ್ವಚ್ಛವಾಗದಿದ್ದರೆ ಸಾರ್ವಜನಿಕರು ಅಂತಹ ಜಾಗದ ಫೋಟೋ ಹಾಗೂ ಜಿಪಿಎಸ್ ಸಮೇತ ವಾಟ್ಸ್ ಆಪ್ ಚಾಟ್-ಬಾಟ್ ಸಂಖ್ಯೆ: +91-9448197197 ಗೆ ದೂರು ನೀಡಬಹುದು. ದೂರುದಾರರ ವೈಯಕ್ತಿಕ ವಿವರಗಳನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುತ್ತದೆ.

ಮಾಲೀಕರು ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸಿದ ಬಳಿಕ ಸುತ್ತಲೂ ಬೇಲಿ ಅಥವಾ ಕಾಂಪೌಂಡ್ ನಿರ್ಮಿಸಿಕೊಂಡು, ಯಾರೂ ಸಹ ಅನಧಿಕೃತವಾಗಿ ತ್ಯಾಜ್ಯ ಸುರಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಪ್ರಾಧಿಕಾರ ಸೂಚಿಸಿದೆ.

ಸ್ವಚ್ಛ ಹಾಗೂ ಸುಂದರ ಬೆಂಗಳೂರು ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕರು ಹಾಗೂ ನಿವೇಶನ ಮಾಲೀಕರು ಕೈಜೋಡಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮನವಿ ಮಾಡಿದೆ.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande