
ಬೆಂಗಳೂರು, 28 ಜುಲೈ (ಹಿ.ಸ.):
ಆ್ಯಂಕರ್:
ರಾಜ್ಯದಲ್ಲಿ ಒಂದೆಡೆ ಕುಡಿಯುವ ನೀರಿಗೂ ಹಾಹಾಕಾರ ಮೂಡುತ್ತಿದ್ದರೆ, ಮತ್ತೊಂದೆಡೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತೊಮ್ಮೆ ತಮಿಳುನಾಡಿಗೆ ಶರಣಾಗಿದೆ ಎಂದು ಪ್ರತಿ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿ ಕಾಪಾಡುವಲ್ಲಿ ಆಡಳಿತಾರೂಡ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ನೆಲೆಸಿರುವ ಮಧ್ಯೆಯೂ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಬಿಡಲು ಸರ್ಕಾರ ಮುಂದಾಗಿರುವುದು ಕನ್ನಡಿಗರಿಗೆ ಎಸಗುತ್ತಿರುವ ದೊಡ್ಡ ದ್ರೋಹ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ನ್ಯಾಯಾಲಯಗಳು ಹಾಗೂ ಪ್ರಾಧಿಕಾರಗಳ ಮುಂದೆ ರಾಜ್ಯದ ಪರ ಸಮರ್ಥ ವಾದ ಮಂಡಿಸಲು ಮುಂಚಿತವಾಗಿ ಎಚ್ಚರಿಕೆ ನೀಡಿದರೂ, ಸರ್ಕಾರದ ನಿರ್ಲಕ್ಷ್ಯ ಹಾಗೂ ಕಾಲಹರಣದಿಂದ ಕಾವೇರಿ ಜಲಾಶಯಗಳು ಬರಿದಾಗುವ ಹಂತಕ್ಕೆ ತಲುಪಿವೆ ಎಂದು ಅಶೋಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೈಕಮಾಂಡ್ ಮುಲಾಜಿನಲ್ಲಿ ಸರ್ಕಾರ?
ರಾಜಕೀಯ ಹಿತಾಸಕ್ತಿ ಹಾಗೂ ಹೈಕಮಾಂಡ್ ಮುಲಾಜಿಗೆ ಬಿದ್ದು ತಮಿಳುನಾಡಿನ ಒಲವು ಗಳಿಸಲು ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ನೀರಾವರಿ ಸಚಿವರು ಕಾವೇರಿ ಕೊಳ್ಳದ ರೈತರ ಬದುಕನ್ನು ಬಲಿ ಕೊಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ರಾಜ್ಯದ ಜನತೆ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII