ನಾಳೆ ಕೃಷ್ಣಾ ನದಿಯ ಉಗಮಸ್ಥಳ ಮಹಾಬಳೇಶ್ವರದಲ್ಲಿ ರೈತರಿಂದ ಗಂಗಾಪೂಜೆ, ಬಾಗಿನ ಅರ್ಪಣೆ
ವಿಜಯಪುರ, 28 ಜುಲೈ (ಹಿ.ಸ.) ಆ್ಯಂಕರ್ : ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಕೃಷ್ಣಾ ನದಿಯ ಉಗಮಸ್ಥಳ ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಮಹಾಬಳೇಶ್ವರದಲ್ಲಿ ನಡೆಯಲಿರುವ 25ನೇ ವರ್ಷದ ನಿರಂತರ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 100ಕ್ಕೂ
ಕೃಷ್ಣ


ವಿಜಯಪುರ, 28 ಜುಲೈ (ಹಿ.ಸ.)

ಆ್ಯಂಕರ್ : ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಕೃಷ್ಣಾ ನದಿಯ ಉಗಮಸ್ಥಳ ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಮಹಾಬಳೇಶ್ವರದಲ್ಲಿ ನಡೆಯಲಿರುವ 25ನೇ ವರ್ಷದ ನಿರಂತರ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 100ಕ್ಕೂ ಹೆಚ್ಚು ರೈತರು, ರೈತ ಮಹಿಳೆಯರು ಹಾಗೂ ಮುಖಂಡರು ಮಂಗಳವಾರ ಮಹಾಬಳೇಶ್ವರದತ್ತ ಪ್ರಯಾಣ ಬೆಳೆಸಿದರು.

ವಿಜಯಪುರ ನಗರದ ಹೊಸ ಪ್ರವಾಸಿ ಮಂದಿರದಿಂದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರ ನೇತೃತ್ವದಲ್ಲಿ ರೈತರ ತಂಡ ವಿಶೇಷ ವಾಹನಗಳಲ್ಲಿ ಹೊರಟಿತು. ಈ ವೇಳೆ ಕೃಷ್ಣಾ ಮಾತೆಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ಈ ಪವಿತ್ರ ಯಾತ್ರೆಗೆ ರೈತರು ಉತ್ಸಾಹದಿಂದ ತೆರಳಿದರು. ನಾಳೆ ಮಹಾಬಳೇಶ್ವರದ ಐತಿಹಾಸಿಕ ಪಂಚಗಂಗಾ ದೇವಸ್ಥಾನದಲ್ಲಿ ಕೃಷ್ಣಾ ಮಾತೆಗೆ ವಿಶೇಷ ಗಂಗಾಪೂಜೆ, ಬಾಗಿನ ಅರ್ಪಣೆ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಕೃಷಿ, ಕುಡಿಯುವ ನೀರು ಹಾಗೂ ಜನಜೀವನಕ್ಕೆ ಕೃಷ್ಣಾ ನದಿಯೇ ಪ್ರಮುಖ ಆಧಾರವಾಗಿದೆ. ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳ ಲಕ್ಷಾಂತರ ರೈತರು ಕೃಷ್ಣಾ ನದಿಯ ನೀರನ್ನೇ ಅವಲಂಬಿಸಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಈ ಭಾಗದಲ್ಲಿ ಮಳೆ ಕೊರತೆ ಎದುರಾದರೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುವ ಭಾರೀ ಮಳೆಯಿಂದ ಕೃಷ್ಣಾ ನದಿ ತುಂಬಿ ಹರಿಯುವುದರಿಂದ ಉತ್ತರ ಕರ್ನಾಟಕದ ಜನತೆಗೆ ಜೀವಜಲ ದೊರೆಯುತ್ತದೆ.

ಈ ಹಿನ್ನೆಲೆ ಕೃಷ್ಣಾ ಮಾತೆಯ ಮೇಲಿನ ಕೃತಜ್ಞತೆಯನ್ನು ವ್ಯಕ್ತಪಡಿಸುವ ಉದ್ದೇಶದಿಂದ ಕಳೆದ 25 ವರ್ಷಗಳಿಂದ ನಿರಂತರವಾಗಿ ಮಹಾಬಳೇಶ್ವರದಲ್ಲಿ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಸಂಪ್ರದಾಯವು ಉತ್ತರ ಕರ್ನಾಟಕದ ರೈತರಲ್ಲಿ ವಿಶೇಷ ಭಕ್ತಿಭಾವವನ್ನು ಮೂಡಿಸಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುತ್ತಿದ್ದಾರೆ.

ಈ ವರ್ಷದ ಯಾತ್ರೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಡಿ. ಅಂಗಡಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿರಾದಾರ್, ರಾಮಣ್ಣ ಬಾಟಿ, ವಿಜಯ ಪೂಜಾರಿ, ಶ್ರೀಶೈಲ್ ಒಡಗಲ್, ಅಶೋಕ್ ಗಿಡ್ಡಪಗೋಳ, ಶೇಖು ಗಾಣಿಗೇರ್, ಆನಂದ ಬಿಸ್ಟಗೊಂಡ, ಈರಪ್ಪ ಜಿದ್ದಿಬಾಗಿಲ, ಪುಟ್ಟು ತೇಲಿ, ಶ್ರೀಮತಿ ಕಸ್ತೂರಿ ಬೆಳ್ಳುಬ್ಬಿ, ಶ್ರೀಮತಿ ರೇಣುಕಾ ಅಂಥನಿ, ಮಲ್ಲು ಕಲಾದಗಿ ಸೇರಿದಂತೆ ನೂರಕ್ಕೂ ಹೆಚ್ಚು ರೈತರು, ರೈತ ಮಹಿಳೆಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದಾರೆ.

ಮಹಾರಾಷ್ಟ್ರದ ಸಾತಾರ ಜಿಲ್ಲೆಯಲ್ಲಿರುವ ಮಹಾಬಳೇಶ್ವರದ ಪಂಚಗಂಗಾ ಕ್ಷೇತ್ರವು ಕೃಷ್ಣಾ, ಕೊಯ್ನಾ, ವೇಣ್ಣಾ, ಸಾವಿತ್ರಿ ಹಾಗೂ ಗಾಯತ್ರಿ ಸೇರಿದಂತೆ ಐದು ಪವಿತ್ರ ನದಿಗಳ ಉಗಮಸ್ಥಳವೆಂದು ಪ್ರಸಿದ್ಧಿ ಪಡೆದಿದೆ. ಈ ಪವಿತ್ರ ಕ್ಷೇತ್ರದಲ್ಲಿ ನಡೆಯುವ ಗಂಗಾಪೂಜೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಹೊಂದಿದ್ದು, ಉತ್ತರ ಕರ್ನಾಟಕದ ಜನರು ಕೃಷ್ಣಾ ಮಾತೆಯನ್ನು ಜೀವನದಾಯಕಿಯಾಗಿ ಆರಾಧಿಸುವ ಪರಂಪರೆಯ ಪ್ರತೀಕವಾಗಿದೆ.

ನಾಳೆ ನಡೆಯಲಿರುವ ವಿಶೇಷ ಪೂಜೆಯಲ್ಲಿ ಉತ್ತರ ಕರ್ನಾಟಕದಲ್ಲಿ ಉತ್ತಮ ಮಳೆಯಾಗಲಿ, ಜಲಾಶಯಗಳು ಭರ್ತಿಯಾಗಲಿ, ರೈತರ ಬೆಳೆ ಸಮೃದ್ಧಿಯಾಗಿ ಬೆಳೆಯಲಿ, ರಾಜ್ಯದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಕಳೆದ 25 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಗಂಗಾಪೂಜೆ ಕಾರ್ಯಕ್ರಮವು ಉತ್ತರ ಕರ್ನಾಟಕದ ರೈತರ ನಂಬಿಕೆ, ಭಕ್ತಿ ಮತ್ತು ಪ್ರಕೃತಿಯ ಮೇಲಿನ ಕೃತಜ್ಞತೆಯ ವಿಶಿಷ್ಟ ಸಂಕೇತವಾಗಿ ಗುರುತಿಸಿಕೊಂಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande