ವಿಜಯಪುರ: ಆಧುನಿಕ ತೊಗರಿ ಮಾರುಕಟ್ಟೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ
ವಿಜಯಪುರ, 28 ಜುಲೈ (ಹಿ.ಸ.) ಆ್ಯಂಕರ್ : ವಿಜಯಪುರ ನಗರದ ವಾರ್ಡ್ ನಂ.13ರ ವ್ಯಾಪ್ತಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ 2025-26ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿ ಮಂಜೂರಾದ ₹9.49 ಕೋಟಿ ವೆಚ್ಚದ ಆಧುನಿಕ ತೊಗರಿ ಮಾರುಕಟ್ಟೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಇಂದು ಶ
ಪೂಜೆ


ವಿಜಯಪುರ, 28 ಜುಲೈ (ಹಿ.ಸ.)

ಆ್ಯಂಕರ್ : ವಿಜಯಪುರ ನಗರದ ವಾರ್ಡ್ ನಂ.13ರ ವ್ಯಾಪ್ತಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ 2025-26ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿ ಮಂಜೂರಾದ ₹9.49 ಕೋಟಿ ವೆಚ್ಚದ ಆಧುನಿಕ ತೊಗರಿ ಮಾರುಕಟ್ಟೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಇಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೂಮಿಪೂಜೆ ನೆರವೇರಿಸಿದರು.

ಈ ಯೋಜನೆಯು ರೈತರು ಹಾಗೂ ಕೃಷಿ ಉತ್ಪನ್ನಗಳ ವ್ಯಾಪಾರಿಗಳಿಗೆ ಅತ್ಯಾಧುನಿಕ ಮಾರುಕಟ್ಟೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗಣ್ಯರು, ವಿಜಯಪುರ ಜಿಲ್ಲೆ ಕೃಷಿ ಉತ್ಪನ್ನಗಳ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನದಲ್ಲಿದ್ದು, ತೊಗರಿ ಬೆಳೆಯಲ್ಲಿ ರಾಜ್ಯದಲ್ಲೇ ತನ್ನದೇ ಆದ ಹೆಗ್ಗಳಿಕೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ರೈತರು ಹಾಗೂ ವರ್ತಕರಿಗೆ ಅನುಕೂಲವಾಗುವಂತೆ ಸುಸಜ್ಜಿತ, ಆಧುನಿಕ ಹಾಗೂ ಎಲ್ಲ ಅಗತ್ಯ ಸೌಲಭ್ಯಗಳನ್ನು ಒಳಗೊಂಡ ತೊಗರಿ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹೊಸ ಕಟ್ಟಡದಲ್ಲಿ ರೈತರಿಗೆ ಉತ್ತಮ ಗುಣಮಟ್ಟದ ಸೇವೆಗಳು, ಉತ್ಪನ್ನಗಳ ಸುರಕ್ಷಿತ ಸಂಗ್ರಹಣೆ, ಸುಗಮ ಹರಾಜು ವ್ಯವಸ್ಥೆ, ವರ್ತಕರಿಗೆ ಅನುಕೂಲಕರ ವ್ಯಾಪಾರ ವಾತಾವರಣ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ. ಇದರಿಂದ ಮಾರುಕಟ್ಟೆಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಹೆಚ್ಚುವುದರ ಜೊತೆಗೆ ರೈತರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯುವ ವಾತಾವರಣ ನಿರ್ಮಾಣವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು.

ಇದೇ ಸಂದರ್ಭದಲ್ಲಿ ಎಪಿಎಂಸಿ ಆವರಣದಲ್ಲಿನ ವಿವಿಧ ಸಮಸ್ಯೆಗಳ ಕುರಿತು ರೈತರು, ಗ್ರಾಹಕರು ಹಾಗೂ ವರ್ತಕರ ಅಹವಾಲುಗಳನ್ನು ಆಲಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ಕುಡಿಯುವ ನೀರು, ರಸ್ತೆ, ಸ್ವಚ್ಛತೆ, ವಾಹನ ನಿಲುಗಡೆ, ತೂಕ ಮಾಪನ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಅಧಿಕಾರಿಗಳು ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಯೋಜನೆ ಪೂರ್ಣಗೊಂಡ ಬಳಿಕ ವಿಜಯಪುರ ಎಪಿಎಂಸಿಗೆ ಹೊಸ ರೂಪ ದೊರೆಯಲಿದ್ದು, ರೈತ ಸ್ನೇಹಿ ಹಾಗೂ ವ್ಯಾಪಾರ ಸ್ನೇಹಿ ಮಾರುಕಟ್ಟೆಯಾಗಿ ಅಭಿವೃದ್ಧಿಯಾಗುವ ನಿರೀಕ್ಷೆ ವ್ಯಕ್ತವಾಗಿದೆ. ಜಿಲ್ಲೆಯ ಕೃಷಿ ವಾಣಿಜ್ಯ ಚಟುವಟಿಕೆಗಳಿಗೆ ಈ ಕಟ್ಟಡ ಹೊಸ ಚೈತನ್ಯ ತುಂಬಲಿದ್ದು, ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ನೀಡಲಿದೆ.

ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರು, ಎಪಿಎಂಸಿ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ರೈತರು, ವರ್ತಕರು, ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಆಗ್ರಹಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande