
ವಿಜಯಪುರ, 28 ಜುಲೈ (ಹಿ.ಸ.)
ಆ್ಯಂಕರ್ : ವಿಜಯಪುರ ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶಗಳ ರಸ್ತೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಿ, ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ಸಾಗುತ್ತಿವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂಡಿ ತಾಲೂಕಿನ ಪ್ರಮುಖ ಸಂಪರ್ಕ ರಸ್ತೆಗಳಲ್ಲೊಂದಾದ ನಾದ–ಗೊಳಸಾರ–ಮಿರಗಿ ರಸ್ತೆ ಅಭಿವೃದ್ಧಿ ಕಾಮಗಾರಿಯು ಭರದಿಂದ ನಡೆಯುತ್ತಿದ್ದು, ಸುಮಾರು 3 ಕಿಲೋಮೀಟರ್ ಉದ್ದದ ರಸ್ತೆ ಡಾಂಬರೀಕರಣ ಕಾರ್ಯ ಪ್ರಗತಿಯಲ್ಲಿದೆ. ಈ ಕಾಮಗಾರಿಗೆ ₹5 ಕೋಟಿ ಅನುದಾನ ಮಂಜೂರಾಗಿದ್ದು, ಅತ್ಯುತ್ತಮ ಗುಣಮಟ್ಟದಲ್ಲಿ ರಸ್ತೆ ನಿರ್ಮಾಣ ಮಾಡುವ ಮೂಲಕ ಗ್ರಾಮೀಣ ಪ್ರದೇಶದ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ.
ಈ ರಸ್ತೆ ಹಲವು ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ರೈತರು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು, ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ತೆರಳಲು ಹಾಗೂ ಸಾರ್ವಜನಿಕರು ದೈನಂದಿನ ಸಂಚಾರ ನಡೆಸಲು ಬಹಳ ಅನುಕೂಲಕರವಾಗಿದೆ.
ವರ್ಷಗಳ ಕಾಲ ರಸ್ತೆ ಹದಗೆಟ್ಟಿದ್ದರಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದರು.
ಇದೀಗ ನಡೆಯುತ್ತಿರುವ ಡಾಂಬರೀಕರಣ ಕಾಮಗಾರಿಯಿಂದ ಆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.
ಕಾಮಗಾರಿಯು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳುವಂತೆ ಹಾಗೂ ಯಾವುದೇ ರಾಜಿ ಇಲ್ಲದೆ ಗುಣಮಟ್ಟ ಕಾಪಾಡುವಂತೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದ್ದಾರೆ.
ಈ ರಸ್ತೆ ಅಭಿವೃದ್ಧಿಯಿಂದ ನಾದ, ಗೊಳಸಾರ, ಮಿರಗಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರಿಗೆ ವೇಗದ ಮತ್ತು ಸುರಕ್ಷಿತ ಸಂಚಾರ ವ್ಯವಸ್ಥೆ ದೊರೆಯಲಿದ್ದು, ಗ್ರಾಮೀಣ ಆರ್ಥಿಕ ಚಟುವಟಿಕೆಗೂ ಹೊಸ ಉತ್ತೇಜನ ಸಿಗಲಿದೆ. ಅಲ್ಲದೆ ತುರ್ತು ಆರೋಗ್ಯ ಸೇವೆ, ಶಿಕ್ಷಣ ಹಾಗೂ ಕೃಷಿ ಚಟುವಟಿಕೆಗಳಿಗೆ ಈ ರಸ್ತೆ ಪ್ರಮುಖ ಪಾತ್ರ ವಹಿಸಲಿದೆ.
ಇಂಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರಸ್ತೆ, ಕುಡಿಯುವ ನೀರು, ನೀರಾವರಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆಗೆ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಶಾಸಕರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande