
ಬೆಂಗಳೂರು, 20 ಜುಲೈ (ಹಿ.ಸ.):
ಆ್ಯಂಕರ್:
ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುವ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣದಲ್ಲಿ ತುರ್ತು ವೈದ್ಯಕೀಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ಹಾಗೂ ಮೆಡಿಕವರ್ ಆಸ್ಪತ್ರೆ ಸಹಯೋಗದಲ್ಲಿ 24x7 ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಲಾಗಿದೆ. ಈ ಸೇವೆಯು ರೈಲ್ವೆ ಪ್ರಯಾಣಿಕರು, ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೆ ಸಂಪೂರ್ಣ ಉಚಿತವಾಗಿ ಲಭ್ಯವಿರಲಿದೆ.
ಈ ಹಿಂದೆ ನಿಲ್ದಾಣದಲ್ಲಿ ತುರ್ತು ಆರೋಗ್ಯ ಸಮಸ್ಯೆ ಎದುರಾದಾಗ ನಗರದ ದಟ್ಟಣೆಯಿಂದಾಗಿ ಆಂಬ್ಯುಲೆನ್ಸ್ ಸಮಯಕ್ಕೆ ತಲುಪದೆ ರೋಗಿಗಳ ಪ್ರಾಣಕ್ಕೆ ಕುತ್ತುಂಟಾಗುತ್ತಿತ್ತು. ಇದನ್ನು ಮನಗಂಡು ಮೆಡಿಕವರ್ ಆಸ್ಪತ್ರೆಯು ನಿಲ್ದಾಣದಲ್ಲೇ ಆಂಬ್ಯುಲೆನ್ಸ್ ಅನ್ನು ಶಾಶ್ವತವಾಗಿ ನಿಯೋಜಿಸಿದೆ. ಈ ವಾಹನದಲ್ಲಿ ಅತ್ಯಾಧುನಿಕ ಜೀವ ರಕ್ಷಕ ವೈದ್ಯಕೀಯ ಉಪಕರಣಗಳು, ಆಮ್ಲಜನಕ ವ್ಯವಸ್ಥೆ, ಪ್ರಾಥಮಿಕ ಚಿಕಿತ್ಸಾ ಕಿಟ್ ಜೊತೆಗೆ ಅನುಭವಿ ನರ್ಸ್ ಹಾಗೂ ತರಬೇತಿ ಪಡೆದ ಚಾಲಕರು 24 ಗಂಟೆಯೂ ಸೇವೆಗೆ ಲಭ್ಯವಿರಲಿದ್ದಾರೆ.
ಅಪಘಾತ, ಹೃದಯಾಘಾತ ಹಾಗೂ ಇತರ ತುರ್ತು ಸಂದರ್ಭಗಳಲ್ಲಿ ಯಾವುದೇ ವಿಳಂಬವಿಲ್ಲದೆ ತಕ್ಷಣ ಚಿಕಿತ್ಸೆ ನೀಡಿ ರೋಗಿಗಳ ಅಮೂಲ್ಯ ಜೀವ ರಕ್ಷಿಸಲು ಈ ಸೌಲಭ್ಯವು ಅತ್ಯಂತ ಸಹಕಾರಿಯಾಗಲಿದೆ. ಮೆಡಿಕವರ್ ಆಸ್ಪತ್ರೆಯ ರೀಜನಲ್ ಡೈರೆಕ್ಟರ್ ಸಿದ್ದಾರೆಡ್ಡಿ, ನೈರುತ್ಯ ರೈಲ್ವೆಯ ಪ್ರಿನ್ಸಿಪಲ್ ಚೀಫ್ ಮೆಡಿಕಲ್ ಡೈರೆಕ್ಟರ್ ಡಾ. ಎಸ್. ಶೋಭಾ ಜಾಸ್ಮಿನ್ ಸೇರಿದಂತೆ ಮುಖಂಡರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII