
ವಿಜಯಪುರ, 20 ಜುಲೈ (ಹಿ.ಸ.)
ಆ್ಯಂಕರ್ : ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ತಮ್ಮ ಜೀವವನ್ನು ಹಾಗೂ ಕುಟುಂಬದ ಸಂತೋಷವನ್ನು ಕಾಪಾಡಿಕೊಳ್ಳಬೇಕು ಎಂದು ಬಾಗಲಕೋಟೆ
ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಇಬ್ಬರ ಸಂತೋಷದ ಪ್ರಯಾಣ... ಒಂದು ಕ್ಷಣದ ನಿರ್ಲಕ್ಷ್ಯದಿಂದ ದುಃಖದ ಅಂತ್ಯವಾಗದಿರಲಿ ಎಂಬ ಸಂದೇಶದೊಂದಿಗೆ ರಸ್ತೆ ಸುರಕ್ಷತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಸಾವು-ನೋವುಗಳು ಹೆಲ್ಮೆಟ್ ಧರಿಸದ ಕಾರಣ ಸಂಭವಿಸುತ್ತಿದ್ದು, ಸುರಕ್ಷತಾ ನಿಯಮಗಳನ್ನು ಪಾಲಿಸಿದರೆ ಇಂತಹ ದುರ್ಘಟನೆಗಳನ್ನು ಬಹುಮಟ್ಟಿಗೆ ತಡೆಗಟ್ಟಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ದ್ವಿಚಕ್ರ ವಾಹನ ಚಾಲಕ ಹಾಗೂ ಹಿಂಬದಿ ಸವಾರ ಇಬ್ಬರೂ ಕಡ್ಡಾಯವಾಗಿ ಗುಣಮಟ್ಟದ ಐಎಸ್ಐ ಪ್ರಮಾಣಿತ ಹೆಲ್ಮೆಟ್ ಧರಿಸಬೇಕು. ವಾಹನ ಚಲಾಯಿಸುವಾಗ ಅತಿವೇಗ, ಮೊಬೈಲ್ ಬಳಕೆ, ನಿರ್ಲಕ್ಷ್ಯದ ಚಾಲನೆ ಹಾಗೂ ಸಂಚಾರ ನಿಯಮ ಉಲ್ಲಂಘನೆಗಳು ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ. ಆದ್ದರಿಂದ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ವಾಹನ ಚಲಾಯಿಸುವ ಮೂಲಕ ತಮ್ಮ ಕುಟುಂಬದ ಸಂತೋಷವನ್ನು ಕಾಪಾಡಿಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಸ್ತೆ ಸುರಕ್ಷತೆ ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆಯಾಗಿದೆ. ಒಂದು ಕ್ಷಣದ ಅಜಾಗರೂಕತೆ ಜೀವಮಾನವಿಡೀ ನೋವಿಗೆ ಕಾರಣವಾಗಬಹುದು. ಆದ್ದರಿಂದ ಹೆಲ್ಮೆಟ್ ಧರಿಸುವುದು ಕೇವಲ ಕಾನೂನು ಪಾಲನೆಯಲ್ಲ, ಅದು ಜೀವ ರಕ್ಷಣೆಯ ಕವಚವಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ನಿಮ್ಮ ಅಮೂಲ್ಯ ಜೀವ ಹಾಗೂ ನಿಮ್ಮ ಕುಟುಂಬದ ನಗು ನಿಮ್ಮ ಕೈಯಲ್ಲಿದೆ. ಹೆಲ್ಮೆಟ್ ಧರಿಸಿ, ಸಂಚಾರ ನಿಯಮಗಳನ್ನು ಪಾಲಿಸಿ, ಸುರಕ್ಷಿತವಾಗಿ ವಾಹನ ಚಲಾಯಿಸಿ ಎಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ, ಪೊಲೀಸ್ ಮಹಾನಿರ್ದೇಶಕರ ಕಚೇರಿ ಹಾಗೂ ಬೆಳಗಾವಿ ವಲಯದ ಐಜಿಪಿ ಕಚೇರಿ ಸಾರ್ವಜನಿಕರಿಗೆ ಕರೆ ನೀಡಿವೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande