
ಬೆಂಗಳೂರು, 20 ಜುಲೈ (ಹಿ.ಸ.):
ಆ್ಯಂಕರ್ :
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಈ ವರ್ಷ ಒಟ್ಟು 64,000 ಸಸಿಗಳನ್ನು ನೆಡುವ ಮಹತ್ವಾಕಾಂಕ್ಷೆಯ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಜಿಬಿಎ ಕೇಂದ್ರ ಕಛೇರಿಯಲ್ಲಿ ಅರಣ್ಯ ವಿಭಾಗದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಗಿಡ ನೆಡುವ ಕಾರ್ಯಕ್ರಮಗಳು ಕೇವಲ ಕಾಗದದ ಮೇಲಿನ ದಾಖಲೆಗಳಿಗೆ ಮಾತ್ರ ಸೀಮಿತವಾಗಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಇಲ್ಲಿಯವರೆಗೆ ನಿಯಮಾನುಸಾರ ಸಸಿಗಳನ್ನು ನೆಡದಿರುವುದು ಹಾಗೂ ಹಿಂದೆ ನೆಟ್ಟ ಲಕ್ಷಾಂತರ ಗಿಡಗಳ ಸರಿಯಾದ ಲೆಕ್ಕವಿಲ್ಲದಿರುವುದನ್ನು ಸಚಿವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಇನ್ನುಮುಂದೆ ಯಾವುದೇ ಕಾರಣಕ್ಕೂ ನಿಯಮ ಮೀರುವಂತಿಲ್ಲ ಮತ್ತು ನೆಟ್ಟ ಪ್ರತಿಯೊಂದು ಸಸಿ ಕಡ್ಡಾಯವಾಗಿ ಬೆಳೆದು ನಿಲ್ಲುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು. ಸಾರ್ವಜನಿಕರ ಹಾಗೂ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ಗಳ ಸಹಭಾಗಿತ್ವದೊಂದಿಗೆ ಈ ಕಾರ್ಯಕ್ರಮ ಜರಗಿದರೆ ಮಾತ್ರ ಅರಣ್ಯೀಕರಣ ಯೋಜನೆಯು ಪಾರದರ್ಶಕತೆ ಮತ್ತು ಪರಿಣಾಮಕಾರಿ ಫಲಿತಾಂಶವನ್ನು ಕಾಣಲು ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII