ಚರಂಡಿ ನೀರು ರೈತರ ಜಮೀನುಗಳಿಗೆ ನುಗ್ಗಿ ಜಮೀನು ನಾಶ: ರೈತರಿಂದ ಪ್ರತಿಭಟನೆ
ಗದಗ, 20 ಜುಲೈ (ಹಿ.ಸ.) ಆ್ಯಂಕರ್:- ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಗರದ ಚರಂಡಿ ನೀರು ಲಂಡಿಹಳ್ಳದ ಮೂಲಕ ಹರಿದು ಅಡರಕಟ್ಟಿ ಹಾಗೂ ಮಂಜಲಾಪುರ ಗ್ರಾಮದ ರೈತರ ಫಲವತ್ತಾದ ಕೃಷಿ ಜಮೀನುಗಳಿಗೆ ನುಗ್ಗುತ್ತಿರುವ ಪರಿಣಾಮ ಸುಮಾರು 150 ಎಕರೆ ಕೃಷಿಭೂಮಿ ಉಳುಮೆಗೆ ಅಯೋಗ್ಯವಾಗಿದ್ದು, ಸುಮಾರು 300ಕ್ಕೂ ಹೆಚ್ಚು ರೈತ
ಫೋಟೋ


ಗದಗ, 20 ಜುಲೈ (ಹಿ.ಸ.)

ಆ್ಯಂಕರ್:- ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಗರದ ಚರಂಡಿ ನೀರು ಲಂಡಿಹಳ್ಳದ ಮೂಲಕ ಹರಿದು ಅಡರಕಟ್ಟಿ ಹಾಗೂ ಮಂಜಲಾಪುರ ಗ್ರಾಮದ ರೈತರ ಫಲವತ್ತಾದ ಕೃಷಿ ಜಮೀನುಗಳಿಗೆ ನುಗ್ಗುತ್ತಿರುವ ಪರಿಣಾಮ ಸುಮಾರು 150 ಎಕರೆ ಕೃಷಿಭೂಮಿ ಉಳುಮೆಗೆ ಅಯೋಗ್ಯವಾಗಿದ್ದು, ಸುಮಾರು 300ಕ್ಕೂ ಹೆಚ್ಚು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿ ರೈತರು ಸೋಮವಾರ ಲಕ್ಷ್ಮೇಶ್ವರ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವರ್ಷಗಳಿಂದ ನಗರ ಚರಂಡಿಯ ಕೊಳಚೆ ನೀರು ಯಾವುದೇ ಸಮರ್ಪಕ ಶುದ್ಧೀಕರಣ ವ್ಯವಸ್ಥೆಯಿಲ್ಲದೆ ಲಂಡಿಹಳ್ಳದ ಮೂಲಕ ಹರಿದು ಕೃಷಿ ಜಮೀನುಗಳಿಗೆ ಸೇರುತ್ತಿದೆ. ಇದರಿಂದ ಫಲವತ್ತಾದ ಭೂಮಿಯಲ್ಲಿ ಕೊಳಚೆ ನೀರು ನಿಂತು ಉಳುಮೆ ಕಾರ್ಯ ನಡೆಸಲು ಸಾಧ್ಯವಾಗುತ್ತಿಲ್ಲ. ಮಣ್ಣಿನ ಫಲವತ್ತತೆ ಕುಸಿಯುತ್ತಿದ್ದು, ಬೆಳೆ ಬೆಳೆಯಲು ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಈ ಸಮಸ್ಯೆಯಿಂದ ಅಡರಕಟ್ಟಿ ಹಾಗೂ ಮಂಜಲಾಪುರ ಗ್ರಾಮದ ನೂರಾರು ರೈತರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಹಲವು ವರ್ಷಗಳಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ರೈತರು ಪುರಸಭೆ ಮುಖ್ಯಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ, ನಗರ ಚರಂಡಿ ನೀರು ಕೃಷಿ ಜಮೀನುಗಳಿಗೆ ಹರಿಯದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಪರ್ಯಾಯ ಚರಂಡಿ ವ್ಯವಸ್ಥೆ ನಿರ್ಮಿಸಿ ಕೊಳಚೆ ನೀರನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಹಾನಿಗೊಳಗಾದ ರೈತರ ಜಮೀನುಗಳ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು, ಸುಮಾರು 150 ಎಕರೆ ಕೃಷಿಭೂಮಿ ಹಾಳಾಗಿದ್ದು, 300ಕ್ಕೂ ಹೆಚ್ಚು ರೈತರು ಸಂಕಷ್ಟದಲ್ಲಿದ್ದಾರೆ. ಕೃಷಿಯೇ ನಮ್ಮ ಬದುಕಿನ ಆಧಾರವಾಗಿದ್ದು, ಚರಂಡಿ ನೀರಿನಿಂದ ಭೂಮಿ ಹಾಳಾಗುತ್ತಿರುವುದರಿಂದ ಕುಟುಂಬ ನಿರ್ವಹಣೆಯೇ ಕಷ್ಟವಾಗಿದೆ. ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ, ಒಂದು ವಾರದೊಳಗೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರೈತರ ಸಭೆ ಕರೆದು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ಅಡರಕಟ್ಟಿ ಗ್ರಾಮದಿಂದ ಗದಗ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪಾದಯಾತ್ರೆ ನಡೆಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ರೈತ ಮುಖಂಡರಾದ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ, ಬಿ.ಟಿ. ಚಂದ್ರಶೇಖರ, ಬಸವರಾಜ ಹೀರೆಮನಿ, ಮುತ್ತಣ್ಣ ಗಡೆಪ್ಪನವರ, ಸಿದ್ದಣ್ಣ ಹವಳದ, ನಿಂಗಪ್ಪ ಪ್ಯಾಟಿ, ಚನ್ನಬಸಪ್ಪ ಹಳೆಮನಿ, ರಾಮಣ್ಣ ಚಿಕ್ಕಣ್ಣವರ, ಗಂಗನಗೌಡ್ರ ಪಾಟೀಲ, ಮಾಂತೇಶ ಹವಳದ, ಯಲ್ಲಪ್ಪ ರೊಳ್ಳಿ ಸೇರಿದಂತೆ ಅಡರಕಟ್ಟಿ ಹಾಗೂ ಮಂಜಲಾಪುರ ಗ್ರಾಮದ ನೂರಾರು ರೈತರು ಉಪಸ್ಥಿತರಿದ್ದು, ಸಮಸ್ಯೆಗೆ ತಕ್ಷಣ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.

ರೈತರ ಮನವಿಗೆ ಪುರಸಭೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ, ನಿಗದಿತ ಅವಧಿಯೊಳಗೆ ಸ್ಪಂದನೆ ಸಿಗದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ರೈತರು ಪುನರುಚ್ಚರಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande