ಮುಂಗಾರು ಬೆಳೆ ವಿಮೆ ನೋಂದಣಿಗೆ ರೈತರಿಗೆ ಜಿಲ್ಲಾಧಿಕಾರಿ ಕರೆ
ಗದಗ, 20 ಜುಲೈ (ಹಿ.ಸ.) ಆ್ಯಂಕರ್:- 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ರೈತರು ಕೊನೆಯ ದಿನಾಂಕದವರೆಗೆ ಕಾಯದೆ ಕೂಡಲೇ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಸಿ.ಎನ
ಫೋಟೋ


ಗದಗ, 20 ಜುಲೈ (ಹಿ.ಸ.)

ಆ್ಯಂಕರ್:- 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ರೈತರು ಕೊನೆಯ ದಿನಾಂಕದವರೆಗೆ ಕಾಯದೆ ಕೂಡಲೇ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಧಿಸೂಚಿತ ಬೆಳೆಗಳನ್ನು ಬೆಳೆಯುತ್ತಿರುವ ರೈತರು ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು. ವಿಶೇಷವಾಗಿ ಬೆಳೆ ಸಾಲ ಪಡೆದಿರುವ ರೈತರಿಗೆ ಬೆಳೆ ವಿಮೆ ಕಡ್ಡಾಯವಾಗಿದ್ದು, ಉಳಿದ ರೈತರು ಸ್ವಯಂಪ್ರೇರಿತವಾಗಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಇಂಡಸ್ಇಂಡ್ ಜನರಲ್ ಇನ್ಸೂರೆನ್ಸ್ ಕಂಪನಿ ಆಯ್ಕೆ

ಪ್ರಸಕ್ತ ಮುಂಗಾರು ಹಂಗಾಮಿಗೆ ಗದಗ ಜಿಲ್ಲೆಯಲ್ಲಿ ಇಂಡಸ್ಇಂಡ್ ಜನರಲ್ ಇನ್ಸೂರೆನ್ಸ್ ಕಂಪನಿ ಅನುಷ್ಠಾನ ವಿಮಾ ಸಂಸ್ಥೆಯಾಗಿ ಆಯ್ಕೆಯಾಗಿದೆ. ಪ್ರಕೃತಿ ವಿಕೋಪ, ಅತಿವೃಷ್ಟಿ, ಅನಾವೃಷ್ಟಿ, ಗಾಳಿ, ಮಳೆ ಸೇರಿದಂತೆ ವಿವಿಧ ಕಾರಣಗಳಿಂದ ಬೆಳೆ ನಷ್ಟ ಸಂಭವಿಸಿದರೆ, ಅರ್ಹ ರೈತರಿಗೆ ಯೋಜನೆಯಡಿ ಪರಿಹಾರ ದೊರೆಯಲಿದೆ.

ಬೆಳೆ ಸಮೀಕ್ಷೆ ವರದಿ ಕಡ್ಡಾಯ

ಬೆಳೆ ವಿಮೆ ಪ್ರಸ್ತಾವನೆಗಳನ್ನು ಬೆಳೆ ಸಮೀಕ್ಷೆ ವರದಿಯೊಂದಿಗೆ ಪರಿಶೀಲಿಸಿ ಪರಿಗಣಿಸಲಾಗುತ್ತದೆ. ರೈತರು ಬೆಳೆ ಸಮೀಕ್ಷೆಯಲ್ಲಿ ದಾಖಲಿಸಿರುವ ಬೆಳೆ ಹೆಸರು ಮತ್ತು ವಿಸ್ತೀರ್ಣದ ಆಧಾರದ ಮೇಲೆಯೇ ವಿಮಾ ಅರ್ಜಿಯನ್ನು ಪರಿಶೀಲಿಸಲಾಗುತ್ತದೆ.

ಬೆಳೆ ಸಮೀಕ್ಷೆ ವರದಿಯಲ್ಲಿ ಪಾಳು ಅಥವಾ ಕಾಟವು ಪ್ರದೇಶ ಎಂದು ದಾಖಲಾಗಿರುವ ಸರ್ವೇ ಸಂಖ್ಯೆಗಳಲ್ಲಿನ ಬೆಳೆಗಳಿಗೆ ಸಲ್ಲಿಸಿರುವ ವಿಮೆ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ರೈತರು ಬೆಳೆದಿರುವ ನಿಖರವಾದ ಬೆಳೆಯ ಮಾಹಿತಿಯನ್ನು ಸಮೀಕ್ಷೆಯಲ್ಲಿ ದಾಖಲಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬೆಳೆ ಸಮೀಕ್ಷೆ ಆ್ಯಪ್ ಶೀಘ್ರದಲ್ಲೇ ಸ್ಥಗಿತ

ಸರ್ಕಾರವು ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆ್ಯಪ್ ಅನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಿರುವುದರಿಂದ, ರೈತರು ತಾವು ಬೆಳೆದಿರುವ ಬೆಳೆಯ ಸಮೀಕ್ಷೆಯನ್ನು ಆದಷ್ಟು ಬೇಗ ಸ್ವತಃ ಅಥವಾ ಅಧಿಕೃತ ಖಾಸಗಿ ನಿವಾಸಿಗಳ ಸಹಾಯದಿಂದ ಆ್ಯಪ್ ಮೂಲಕ ಪೂರ್ಣಗೊಳಿಸಬೇಕು. ಸಮೀಕ್ಷೆ ಪೂರ್ಣಗೊಂಡ ನಂತರವೇ ಬೆಳೆ ವಿಮೆ ಪ್ರಕ್ರಿಯೆ ಸುಗಮವಾಗಲಿದೆ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ.

ಬೆಳೆವಾರು ವಿಮೆ ನೋಂದಣಿಯ ಕೊನೆಯ ದಿನಾಂಕ

ಜುಲೈ 22 (ಸಾಲ ಪಡೆದ ರೈತರಿಗೆ ಮಾತ್ರ):

- ಹೆಸರು (ಮಳೆಯಾಶ್ರಿತ)

- ಹತ್ತಿ (ಮಳೆಯಾಶ್ರಿತ ಹಾಗೂ ನೀರಾವರಿ)

ಜುಲೈ 31:

- ಗೋವಿನ ಜೋಳ (ಮಳೆಯಾಶ್ರಿತ ಮತ್ತು ನೀರಾವರಿ)

- ಸಜ್ಜೆ (ಮಳೆಯಾಶ್ರಿತ)

- ತೊಗರಿ (ಮಳೆಯಾಶ್ರಿತ)

- ಶೇಂಗಾ (ಮಳೆಯಾಶ್ರಿತ ಮತ್ತು ನೀರಾವರಿ)

- ಭತ್ತ (ನೀರಾವರಿ)

- ಕೆಂಪು ಮೆಣಸಿನಕಾಯಿ (ನೀರಾವರಿ)

- ಈರುಳ್ಳಿ (ನೀರಾವರಿ)

ಆಗಸ್ಟ್ 14:

- ಸೂರ್ಯಕಾಂತಿ (ಮಳೆಯಾಶ್ರಿತ ಹಾಗೂ ನೀರಾವರಿ)

- ಕೆಂಪು ಮೆಣಸಿನಕಾಯಿ (ಮಳೆಯಾಶ್ರಿತ)

- ಈರುಳ್ಳಿ (ಮಳೆಯಾಶ್ರಿತ)

ಕೊನೆಯ ದಿನದವರೆಗೆ ಕಾಯಬೇಡಿ

ಪ್ರತಿ ವರ್ಷ ಕೊನೆಯ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗುವುದರಿಂದ ತಾಂತ್ರಿಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ರೈತರು ಕೊನೆಯ ದಿನಾಂಕದವರೆಗೆ ಕಾಯದೆ, ಅಗತ್ಯ ದಾಖಲೆಗಳೊಂದಿಗೆ ತಕ್ಷಣವೇ ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಿಕೊಂಡು ತಮ್ಮ ಬೆಳೆಗಳಿಗೆ ವಿಮಾ ರಕ್ಷಣೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟದ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ರೈತರು ಸರ್ಕಾರದ ಈ ಮಹತ್ವದ ಯೋಜನೆಯ ಸದುಪಯೋಗ ಪಡೆದು ತಮ್ಮ ಕೃಷಿಗೆ ಆರ್ಥಿಕ ಭದ್ರತೆ ಒದಗಿಸಿಕೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande