ಇಳಕಲ್ಲ ಸ್ಮಶಾನದ ಶಿಥಿಲ ಕಟ್ಟಡ ನವೀಕರಣಕ್ಕೆ ಸಾರ್ವಜನಿಕರ ಆಗ್ರಹ
ಬಾಗಲಕೋಟೆ, 20 ಜುಲೈ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಇಳಕಲ್ಲ ನಗರದ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಕ್ರಿಯೆಗಳಿಗೆ ಆಗಮಿಸುವ ನಾಗರಿಕರಿಗಾಗಿ ನಿರ್ಮಿಸಲಾಗಿರುವ ಆಸನ ವ್ಯವಸ್ಥೆಯ ಕಟ್ಟಡವು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಯಾವುದೇ ಕ್ಷಣದಲ್ಲಿ ಛಾವಣಿ ಕುಸಿಯುವ ಅಪಾಯ ಎದುರಾಗಿದೆ ಎಂಬ
ಶೇ


ಬಾಗಲಕೋಟೆ, 20 ಜುಲೈ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ

ಇಳಕಲ್ಲ ನಗರದ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಕ್ರಿಯೆಗಳಿಗೆ ಆಗಮಿಸುವ ನಾಗರಿಕರಿಗಾಗಿ ನಿರ್ಮಿಸಲಾಗಿರುವ ಆಸನ ವ್ಯವಸ್ಥೆಯ ಕಟ್ಟಡವು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಯಾವುದೇ ಕ್ಷಣದಲ್ಲಿ ಛಾವಣಿ ಕುಸಿಯುವ ಅಪಾಯ ಎದುರಾಗಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟಡವನ್ನು ತುರ್ತಾಗಿ ಪರಿಶೀಲಿಸಿ ನವೀಕರಣಗೊಳಿಸುವಂತೆ ನಗರಸಭೆ ಅಧಿಕಾರಿಗಳಿಗೆ ಹಾಗೂ ಆಯುಕ್ತರಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇತ್ತೀಚೆಗೆ ನಗರದ ಸ್ಮಶಾನದಲ್ಲಿ ಪರಿಚಿತರೊಬ್ಬರ ಅಂತ್ಯಕ್ರಿಯೆಗೆ ತೆರಳಿದ್ದ ಸಂದರ್ಭದಲ್ಲಿ, ಮೃತರ ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಳ್ಳುವವರೆಗೆ ಅಲ್ಲಿದ್ದವರು ಕುಳಿತುಕೊಳ್ಳಲು ನಿರ್ಮಿಸಲಾಗಿರುವ ಕಟ್ಟಡದ ದುಸ್ಥಿತಿ ಕಣ್ಣಿಗೆ ಬಿದ್ದಿದೆ. ಕಟ್ಟಡದ ಛಾವಣಿ ಹಾಗೂ ಗೋಡೆಗಳು ಶಿಥಿಲಗೊಂಡಿರುವುದರಿಂದ ಅದರೊಳಗೆ ಕುಳಿತುಕೊಳ್ಳಲು ಜನರು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಟ್ಟಡದ ಛಾವಣಿ ಯಾವ ಕ್ಷಣದಲ್ಲಿ ಕುಸಿಯುತ್ತದೆಯೋ ಎಂಬ ಭಯದಿಂದ ಅನೇಕರು ನಿಂತುಕೊಂಡೇ ವಿಧಿವಿಧಾನ ಮುಗಿಯುವವರೆಗೆ ಕಾಯಬೇಕಾದ ಪರಿಸ್ಥಿತಿ ಎದುರಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಮಶಾನಕ್ಕೆ ಬರುವವರು ದುಃಖದ ವಾತಾವರಣದಲ್ಲಿರುವ ಕುಟುಂಬ ಸದಸ್ಯರು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳು ಆಗಿರುವುದರಿಂದ ಅವರಿಗೆ ಸುರಕ್ಷಿತ ಆಸನ ವ್ಯವಸ್ಥೆ ಕಲ್ಪಿಸುವುದು ಸ್ಥಳೀಯ ಆಡಳಿತದ ಜವಾಬ್ದಾರಿಯಾಗಿದೆ. ಆದರೆ ಹಲವು ವರ್ಷಗಳಿಂದ ಈ ಕಟ್ಟಡದ ನಿರ್ವಹಣೆ ಹಾಗೂ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳದ ಪರಿಣಾಮ ಇದೀಗ ಅದು ಅಪಾಯಕಾರಿಯಾಗಿ ಪರಿಣಮಿಸಿದೆ ಎಂಬ ಆರೋಪ ಕೇಳಿಬರುತ್ತಿದೆ

ಸ್ಥಳೀಯರು ಸಾಮಾಜಿಕ ಜಾಲತಾಣಗಳ ಮೂಲಕವೂ ಈ ಸಮಸ್ಯೆಯನ್ನು ಗಮನಕ್ಕೆ ತಂದು, ಡಿಯರ್ ಕಮೀಷನರ್, ನಗರಸಭೆ ಇಳಕಲ್ಲ ಎಂದು ಉದ್ದೇಶಿಸಿ ಮನವಿ ಮಾಡಿದ್ದಾರೆ. ಸ್ಮಶಾನದಲ್ಲಿರುವ ಈ ಶಿಥಿಲ ಕಟ್ಟಡವನ್ನು ಕೂಡಲೇ ತಾಂತ್ರಿಕವಾಗಿ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಕೆಡವಿ ನೂತನ ಕಟ್ಟಡ ನಿರ್ಮಿಸುವುದಾಗಲಿ ಅಥವಾ ಸಂಪೂರ್ಣ ನವೀಕರಣ ಮಾಡಿ ಸಾರ್ವಜನಿಕರಿಗೆ ಸುರಕ್ಷಿತ ಆಸನ ವ್ಯವಸ್ಥೆ ಕಲ್ಪಿಸುವುದಾಗಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುವ ಮುನ್ನವೇ ನಗರಸಭೆ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಅನಾಹುತ ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವುದಕ್ಕಿಂತ ಮುಂಚಿತವಾಗಿಯೇ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು ಅತ್ಯಗತ್ಯ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಸಂಬಂಧ ಇಳಕಲ್ಲ ನಗರದ ಪತ್ರಕರ್ತರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸಮಸ್ತ ಇಳಕಲ್ಲ ಮಂದಿ ಬಳಗ ಮನವಿ ಮಾಡಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande