
ಗದಗ, 20 ಜುಲೈ (ಹಿ.ಸ.)
ಆ್ಯಂಕರ್:- ಮಕ್ಕಳ ದಿನಾಚರಣೆ-2026ರ ಅಂಗವಾಗಿ ಧೈರ್ಯ, ಸಾಹಸ ಮತ್ತು ಸಮಯಪ್ರಜ್ಞೆ ಮೆರೆದು ಇತರರ ಜೀವ ರಕ್ಷಣೆ ಮಾಡಿದ ಮಕ್ಕಳನ್ನು ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗೌರವಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅರ್ಜಿಗಳನ್ನು ಆಹ್ವಾನಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಇಲಾಖೆಯು, 6 ರಿಂದ 18 ವರ್ಷದೊಳಗಿನ ಬಾಲಕರಿಗೆ ಹೊಯ್ಸಳ ಶೌರ್ಯ ಪ್ರಶಸ್ತಿ ಹಾಗೂ ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದೆ.
ಪ್ರಶಸ್ತಿಗೆ ಅರ್ಹರಾಗಲು ಮಕ್ಕಳು 2025ರ ಆಗಸ್ಟ್ 1ರಿಂದ 2026ರ ಜುಲೈ 31ರೊಳಗೆ ತಮ್ಮ ಪ್ರಾಣದ ಹಂಗನ್ನು ತೊರೆದು, ಸಮಯಪ್ರಜ್ಞೆಯಿಂದ ಇತರರ ಪ್ರಾಣ ಅಥವಾ ಆಸ್ತಿಯನ್ನು ರಕ್ಷಿಸುವಂತಹ ಧೈರ್ಯ ಸಾಹಸ ಪ್ರದರ್ಶಿಸಿರಬೇಕು. ಅಂತಹ ಘಟನೆಗಳಿಗೆ ಸಂಬಂಧಿಸಿದ ದಾಖಲೆಗಳ ಆಧಾರದ ಮೇಲೆ ಅರ್ಜಿಗಳನ್ನು ಪರಿಶೀಲಿಸಿ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ.
ಆಯ್ಕೆಯಾದ ಪ್ರತಿ ಬಾಲಕ ಹಾಗೂ ಬಾಲಕಿಗೆ ₹10,000 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ರಾಜ್ಯ ಮಟ್ಟದಲ್ಲಿ ಸನ್ಮಾನಿಸಲಾಗುತ್ತದೆ. ಸಮಾಜದಲ್ಲಿ ಮಕ್ಕಳ ಧೈರ್ಯ, ಸಾಹಸ ಮತ್ತು ಮಾನವೀಯ ಮೌಲ್ಯಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಇದರೊಂದಿಗೆ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ ಐದು ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ತಲಾ ₹25,000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ. ಅದೇ ರೀತಿ ಮಕ್ಕಳ ಅಭಿವೃದ್ಧಿ, ಶಿಕ್ಷಣ, ರಕ್ಷಣೆ ಹಾಗೂ ಕಲ್ಯಾಣಕ್ಕಾಗಿ ಗಮನಾರ್ಹ ಸೇವೆ ಸಲ್ಲಿಸಿರುವ ಸಂಸ್ಥೆಗಳಿಗೆ ತಲಾ ₹1,00,000 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುತ್ತದೆ.
ಮಕ್ಕಳ ಹಕ್ಕುಗಳ ರಕ್ಷಣೆ, ಶಿಕ್ಷಣ, ಆರೋಗ್ಯ, ಪುನರ್ವಸತಿ, ಪೌಷ್ಟಿಕತೆ ಹಾಗೂ ಸಾಮಾಜಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಇಲಾಖೆ ತಿಳಿಸಿದೆ.
ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗದಗ ಕಚೇರಿಯಿಂದ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು 2026ರ ಆಗಸ್ಟ್ 20ರೊಳಗೆ ಕಚೇರಿ ವೇಳೆಯಲ್ಲಿ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 006, ಜಿಲ್ಲಾ ಆಡಳಿತ ಭವನ, ಗದಗ ಇಲ್ಲಿ ಸಲ್ಲಿಸಬೇಕು.
ಅರ್ಜಿಗಳನ್ನು ಕನ್ನಡ ಭಾಷೆಯಲ್ಲಿಯೇ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ, ಗದಗ ಅಥವಾ ದೂರವಾಣಿ ಸಂಖ್ಯೆ 08372-220711 ಅನ್ನು ಸಂಪರ್ಕಿಸಬಹುದಾಗಿದೆ.
ಮಕ್ಕಳ ಧೈರ್ಯ, ಸಾಹಸ, ಸಾಮಾಜಿಕ ಹೊಣೆಗಾರಿಕೆ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಗೌರವಿಸುವ ಈ ಪ್ರಶಸ್ತಿಗೆ ಅರ್ಹ ಮಕ್ಕಳು, ವ್ಯಕ್ತಿಗಳು ಹಾಗೂ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ಸರ್ಕಾರದ ಈ ಗೌರವಕ್ಕೆ ಪಾತ್ರರಾಗುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮನವಿ ಮಾಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP