
ಬೆಂಗಳೂರು, 19 ಜುಲೈ (ಹಿ.ಸ.)
ಆ್ಯಂಕರ್ :
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರ ಅಂತಿಮ ಯಾತ್ರೆಯ ಸಂದರ್ಭದಲ್ಲಿ ಗಂಭೀರ ಮತ್ತು ಭಾವನಾತ್ಮಕ ದೃಶ್ಯಗಳು ಕಂಡುಬಂದವು. ದಶಕಗಳ ಕಾಲದ ಬಾಳಸಂಗಾತಿಯನ್ನು ಕಳೆದುಕೊಂಡ ದುಃಖದಲ್ಲಿ ದೇವೇಗೌಡರು ಕಣ್ಣೀರಿಟ್ಟಿದ್ದು, ಅಲ್ಲಿ ನೆರೆದಿದ್ದವರ ಮನಕಲಕಿತು.
ಮನೆಯಿಂದ ಪಾರ್ಥಿವ ಶರೀರವನ್ನು ಅಂತಿಮ ಯಾತ್ರೆಗೆ ಕೊಂಡೊಯ್ಯುವ ವೇಳೆ, ಶೈತ್ಯಾಗಾರ ಪೆಟ್ಟಿಗೆಯ ಮೇಲೆ ಕೈಯಿಟ್ಟು ನಿಂತಿದ್ದ ದೇವೇಗೌಡರು, ನೋವು ತಾಳಲಾರದೆ ಬಿಕ್ಕಿ ಬಿಕ್ಕಿ ಅತ್ತರು. ಜೀವನದ ಏಳುಬೀಳುಗಳಲ್ಲಿ ತಮ್ಮ ಜೊತೆಗಿದ್ದ ಸಂಗಾತಿಯನ್ನು ಕಳೆದುಕೊಂಡ ಅವರ ಅಸಹಾಯಕತೆ ಮತ್ತು ಶೋಕ ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿತು.
ಈ ವೇಳೆ ದೇವೇಗೌಡರ ಪುತ್ರಿ ಹಾಗೂ ಕುಟುಂಬದ ಇತರ ಸದಸ್ಯರು ಅವರನ್ನು ಸಮಾಧಾನಪಡಿಸಲು ಹರಸಾಹಸ ಪಟ್ಟರು.
ರಾಜ್ಯದ ರಾಜಕೀಯ ಧುರೀಣರು, ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.
ಕುಟುಂಬ ಸದಸ್ಯರು, ಆಪ್ತ ಸ್ನೇಹಿತರು ಮತ್ತು ಬೆಂಬಲಿಗರ ಸಮ್ಮುಖದಲ್ಲಿ ಅಂತಿಮ ಯಾತ್ರೆ ನೆರವೇರಿತು. ಚೆನ್ನಮ್ಮ ಅವರ ನಿಧನದಿಂದ ದೇವೇಗೌಡರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದ್ದು, ಕರುನಾಡಿನಾದ್ಯಂತ ಅಭಿಮಾನಿಗಳು ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಅವರ ದೈವಭಕ್ತಿ ಮತ್ತು ಸರಳ ವ್ಯಕ್ತಿತ್ವವನ್ನು ಹಲವರು ಸ್ಮರಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / NAVEEN PARADESHII