ಕಾವೇರಿ ನೀರಿನ ಮೇಲೆ ರೈತರಿಗೂ ಹಕ್ಕಿದೆ: ಸಿಎಂ ವಿರುದ್ಧ ಆರ್. ಅಶೋಕ್ ವಾಗ್ದಾಳಿ
ಬೆಂಗಳೂರು, 19 ಜುಲೈ (ಹಿ.ಸ.): ಆ್ಯಂಕರ್: ಕಾವೇರಿ ನೀರು ಹಾಗೂ ಕೃಷಿಗೆ ನೀರು ಪೂರೈಕೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಕಾವೇರಿ ಕರ್ನಾಟಕದ ಹಕ್ಕು
Ashok file photo


ಬೆಂಗಳೂರು, 19 ಜುಲೈ (ಹಿ.ಸ.):

ಆ್ಯಂಕರ್:

ಕಾವೇರಿ ನೀರು ಹಾಗೂ ಕೃಷಿಗೆ ನೀರು ಪೂರೈಕೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಕಾವೇರಿ ಕರ್ನಾಟಕದ ಹಕ್ಕು ಎಂದು ಹೇಳುವ ಸಿಎಂ ಡಿ.ಕೆ. ಶಿವಕುಮಾರ್ ಅವರೇ, ಕರ್ನಾಟಕದ ರೈತರಿಗೂ ನೀರಿನ ಮೇಲೆ ಹಕ್ಕಿದೆ ಎಂಬುದನ್ನು ಮರೆತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಜಲಾಶಯಗಳಲ್ಲಿ ನೀರಿನ ಮಟ್ಟ ಏರುವವರೆಗೆ ಕೃಷಿಗೆ ನೀರು ನೀಡುವುದಿಲ್ಲ ಎಂಬ ಮುಖ್ಯಮಂತ್ರಿ ಅವರ ಹೇಳಿಕೆ ರಾಜ್ಯದ ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇದು ತುಘಲಕ್ ಆಡಳಿತದ ಲಕ್ಷಣವಾಗಿದೆ. ತಮಿಳುನಾಡು ಸರ್ಕಾರದೊಂದಿಗೆ ರಾಜಕೀಯ ಸಂಬಂಧ ಗಟ್ಟಿಗೊಳಿಸಲು ಕರ್ನಾಟಕದ ರೈತರಿಗೆ ನೀರಿಲ್ಲದ ಪರಿಸ್ಥಿತಿ ನಿರ್ಮಿಸಲಾಗುತ್ತಿದೆಯೇ ಎಂದು ಅವರು ಆರೋಪಿಸಿದ್ದಾರೆ.

ಸರ್ಕಾರದ ಕೆಲಸ ನೀರನ್ನು ನಿರಾಕರಿಸುವುದಲ್ಲ, ಸಮರ್ಪಕವಾಗಿ ಪೂರೈಸುವುದಾಗಿದೆ. ಬರಗಾಲದ ಲಕ್ಷಣಗಳು ಕಾಣಿಸಿಕೊಂಡಾಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಾವು ಅಧಿಕೃತವಾಗಿ ಪತ್ರ ಬರೆದು ಸಲಹೆ ನೀಡಿದ್ದರೂ, ಸರ್ಕಾರ ಅದನ್ನು ಪರಿಗಣಿಸದೆ ರೈತರಿಗೆ ಬೆಳೆ ಬೆಳೆಯಬೇಡಿ ಎಂಬ ಅಸಂಬದ್ಧ ಸಲಹೆ ನೀಡಿದೆ ಎಂದು ಟೀಕಿಸಿದ್ದಾರೆ. ಈಗ ಕೃಷಿಗೆ ನೀರು ನೀಡುವುದಿಲ್ಲ ಎಂದು ಪರೋಕ್ಷ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮೇಕೆದಾಟು ಯೋಜನೆ ಜಾರಿಯಾಗಿಲ್ಲ, ಕಾವೇರಿ ನೀರನ್ನೂ ಕೃಷಿಗೆ ನೀಡುವುದಿಲ್ಲ ಎಂದಾದರೆ ಸರ್ಕಾರ ಇನ್ನೂ ಅಧಿಕಾರದಲ್ಲಿ ಉಳಿದಿರುವುದೇ ಏಕೆ ಎಂದು ಪ್ರಶ್ನಿಸಿರುವ ಆರ್. ಅಶೋಕ್, ಕರ್ನಾಟಕದ ಹಿತಾಸಕ್ತಿ ಕಾಪಾಡುವುದರ ಜೊತೆಗೆ ಅನ್ನದಾತರ ಬದುಕನ್ನೂ ರಕ್ಷಿಸಬೇಕಾದ ಹೊಣೆ ಸರ್ಕಾರದ್ದಾಗಿದೆ ಎಂದಿದ್ದಾರೆ.

ರೈತರನ್ನು ಸಂಕಷ್ಟಕ್ಕೆ ತಳ್ಳುವ ನಿರ್ಧಾರಗಳ ಬದಲು ತಕ್ಷಣ ಸಮಗ್ರ ಜಲ ನಿರ್ವಹಣಾ ಯೋಜನೆ ರೂಪಿಸಿ ಕೃಷಿಗೆ ಅಗತ್ಯ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು. ಅನ್ನದಾತನ ಬದುಕು ಉಳಿದರೆ ಮಾತ್ರ ರಾಜ್ಯ ಉಳಿಯುತ್ತದೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande