
ಧಾರವಾಡ, 18 ಜುಲೈ (ಹಿ.ಸ.):
ಆ್ಯಂಕರ್:ಪ್ರಕೃತಿ ವಿಕೋಪದಿಂದ ಉಂಟಾಗುವ ಬೆಳೆ ನಷ್ಟ ಪರಿಹಾರ ಪಡೆಯಲು ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಅಡಿಯಲ್ಲಿ ನಿಗದಿತ ದಿನಾಂಕದೊಳಗೆ ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಸ್ನೇಹಲ್ ಆರ್. ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಜೂನ್ 1ರಿಂದ ಜುಲೈ 17ರವರೆಗೆ 209 ಮಿ.ಮೀ. ವಾಡಿಕೆ ಮಳೆಯ ಬದಲಾಗಿ 142.3 ಮಿ.ಮೀ. ಮಳೆಯಾಗಿದ್ದು, ಶೇ.32ರಷ್ಟು ಮಳೆ ಕೊರತೆ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿಯನ್ನು ಎದುರಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೆಳೆ ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರು ತಮ್ಮ ಬ್ಯಾಂಕ್ ಶಾಖೆಗಳು ಅಥವಾ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳಬಹುದು. ಮುಂಗಾರು ಬೆಳೆಗಳಿಗೆ ವಿಮಾ ಮೊತ್ತದ ಶೇ.2ರಷ್ಟು ಮಾತ್ರ ರೈತರು ಪ್ರೀಮಿಯಂ ಪಾವತಿಸಬೇಕಿದ್ದು, ಉಳಿದ ಮೊತ್ತವನ್ನು ಸರ್ಕಾರ ಭರಿಸಲಿದೆ.
ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಾರ್ವಜನಿಕರು ನೀರು ಮತ್ತು ವಿದ್ಯುತ್ ಅನ್ನು ಮಿತವಾಗಿ ಬಳಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ನೀರು ಸೋರಿಕೆಯಾಗುವ ನಲ್ಲಿಗಳನ್ನು ತಕ್ಷಣ ದುರಸ್ತಿ ಮಾಡುವುದು, ಬಕೆಟ್‌ನಲ್ಲಿ ಸ್ನಾನ ಮಾಡುವುದು, ವಾಹನ ತೊಳೆಯಲು ಪೈಪ್ ಬಳಸದಿರುವುದು, ಎಲ್‌ಇಡಿ ಬಲ್ಬ್‌ಗಳ ಬಳಕೆ, ಅಗತ್ಯವಿಲ್ಲದ ವೇಳೆ ವಿದ್ಯುತ್ ಉಪಕರಣಗಳನ್ನು ಸ್ವಿಚ್ ಆಫ್ ಮಾಡುವುದು ಸೇರಿದಂತೆ ವಿದ್ಯುತ್ ಉಳಿತಾಯ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ.
ಪ್ರತಿ ಹನಿ ನೀರು ಮತ್ತು ಪ್ರತಿ ಯೂನಿಟ್ ವಿದ್ಯುತ್ ಅಮೂಲ್ಯವಾಗಿದ್ದು, ಬರಗಾಲದ ಸಂದರ್ಭದಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.