
ಬೆಂಗಳೂರು, 18 ಜುಲೈ (ಹಿ.ಸ.):
ಆಂಕರ್ :
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ (85) ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಚೆನ್ನಮ್ಮನವರ ಅಗಲಿಕೆ ದೇವೇಗೌಡರ ಕುಟುಂಬಕ್ಕೆ ತುಂಬಲಾರದ ನಷ್ಟ ಎಂದು ಅವರು ಕಂಬನಿ ಮಿಡಿದಿದ್ದಾರೆ.
ಈ ಕುರಿತು ಎಕ್ಸನಲ್ಲಿ ಸಂತಾಪ ಸಂದೇಶ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ, ಅಪಾರ ದೈವಭಕ್ತೆಯಾಗಿದ್ದ ಚೆನ್ನಮ್ಮನವರು ತುಂಬು ಕುಟುಂಬವನ್ನು ಸಾಕಿ ಸಲುಹಿದ ಮಹಾನ್ ತಾಯಿ. ಎಚ್.ಡಿ. ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಅವರ ಕುಟುಂಬದವರ ರಾಜಕೀಯ ಹಾಗೂ ಬದುಕಿನ ಏಳ್ಗೆಯ ಹಿಂದೆ ಚೆನ್ನಮ್ಮನವರ ಪರಿಶ್ರಮ ಅಡಗಿದೆ. ಯಾವುದೇ ಪ್ರಚಾರದ ಬಯಕೆಯಿಲ್ಲದೆ ತೆರೆಮರೆಯಲ್ಲಿ ಇದ್ದು, ಮೌನದಿಂದಲೇ ಇಡೀ ಕುಟುಂಬವನ್ನು ಮುನ್ನಡೆಸಿದ ಶಕ್ತಿ ಅವರು, ಎಂದು ಬಣ್ಣಿಸಿದ್ದಾರೆ.
ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದೇ ಇರುತ್ತಾಳೆ ಎನ್ನುವಂತೆ, ದೇವೇಗೌಡರ ಪ್ರತಿ ಯಶಸ್ಸಿನಲ್ಲೂ ಅವರು ಬೆನ್ನೆಲುಬಾಗಿ ನಿಂತಿದ್ದರು. ಕುಟುಂಬದ ಸದಸ್ಯರು ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದ ಸ್ಥಿತಪ್ರಜ್ಞೆಯನ್ನು ಅವರು ಹೊಂದಿದ್ದರು. ಅವರು ಆಸ್ಪತ್ರೆಯಿಂದ ಗುಣಮುಖರಾಗಿ ಮರಳುತ್ತಾರೆ ಎಂಬ ನಂಬಿಕೆ ಎಲ್ಲರಲ್ಲಿಯೂ ಇತ್ತು, ಆದರೆ ಅದು ಸುಳ್ಳಾಗಿದ್ದು ಬಹಳ ಬೇಸರ ತಂದಿದೆ, ಎಂದು ಸಿಎಂ ತಿಳಿಸಿದ್ದಾರೆ. ದೇವೇಗೌಡರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / NAVEEN PARADESHII