
ಬಳ್ಳಾರಿ , 18 ಜುಲೈ (ಹಿ.ಸ.):
ಆಂಕರ್ :
ಬಳ್ಳಾರಿ ನಗರದ ಕೌಲ್ ಬಜಾರ್ ಹಾಗೂ ಕಂಟೋನ್ಮೆಂಟ್ ಪ್ರದೇಶಗಳಲ್ಲಿ ಅನಧಿಕೃತವಾಗಿ ಒತ್ತುವರಿಯಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಜೆಸಿಬಿ ಯಂತ್ರಗಳ ಮೂಲಕ ಯಶಸ್ವಿಯಾಗಿ ತೆರವುಗೊಳಿಸಿದ್ದಾರೆ. ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರ ನಿರ್ದೇಶನದ ಮೇರೆಗೆ, ಅಪರ ಜಿಲ್ಲಾಧಿಕಾರಿ ಮಹಮ್ಮದ್.ಎನ್ ಝುಬೇರ್ ಮತ್ತು ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ ಅವರ ನೇತೃತ್ವದಲ್ಲಿ ಈ ಜಂಟಿ ಕಾರ್ಯಾಚರಣೆ ನಡೆಸಲಾಯಿತು.
ನಗರದ ಸಿಟಿಸಿ ವಾರ್ಡ್ ನಂ. 20ರ ಬ್ಲಾಕ್ ನಂ. 13ರಲ್ಲಿ ಸುಮಾರು 0.93 ಸೆಂಟ್ಸ್ ವಿಸ್ತೀರ್ಣದ ಸರ್ಕಾರಿ ಹಳ್ಳದ ಜಮೀನು ಮತ್ತು ಕಂಟೋನ್ಮೆಂಟ್ ವ್ಯಾಪ್ತಿಯ ಸಿಟಿಸಿ ವಾರ್ಡ್ ನಂ. 21ರ ಬ್ಲಾಕ್ ನಂ. 03ರಲ್ಲಿ 0.10.50 ಸೆಂಟ್ಸ್ ಜಮೀನಿನಲ್ಲಿ ನಿರ್ಮಿಸಿದ್ದ ಅನಧಿಕೃತ ಶೆಡ್ಗಳು ಹಾಗೂ ಕಟ್ಟಡಗಳನ್ನು ಅಧಿಕಾರಿಗಳು ನೆಲಸಮಗೊಳಿಸಿದರು.
ತೆರವುಗೊಳಿಸಲಾದ ಸ್ಥಳಗಳಲ್ಲಿ ಸರ್ಕಾರಿ ಫಲಕಗಳನ್ನು ಅಳವಡಿಸಲಾಗಿದ್ದು, ಇನ್ನು ಮುಂದೆ ಒತ್ತುವರಿ ಮಾಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಕಾರ್ಯಾಚರಣೆ ವೇಳೆ ಕಂದಾಯ ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು. ಇಲಾಖೆಯ ಈ ದಿಟ್ಟ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / NAVEEN PARADESHII