ಜಿಪ್ಲೈನ್ ಕೇಬಲ್ ತುಂಡು : 40 ಅಡಿ ಮೇಲಿಂದ ಬಿದ್ದ ಪ್ರವಾಸಿ ಗಂಭೀರ ಗಾಯ
ವಿಜಯಪುರ, 18 ಜುಲೈ (ಹಿ.ಸ.) ಆ್ಯಂಕರ್ : ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣ ದಾಂಡೇಲಿಯ ಸ್ಟರ್ಲಿಂಗ್ ರಿವರ್ ರೆಸಾರ್ಟ್ನಲ್ಲಿ ಜಿಪ್ಲೈನ್ ಸಾಹಸ ಕ್ರೀಡೆಯಲ್ಲಿ ಭಾಗವಹಿಸಿದ್ದ ವಿಜಯಪುರದ ಪ್ರವಾಸಿಗ ಕುಬೇರ್ ಸುರಪುರ ಅವರು ಭೀಕರ ಅವಘಡಕ್ಕೆ ಒಳಗಾಗಿದ್ದಾರೆ. ಜಿಪ್ಲೈನ್ ಕೇಬಲ್ ಏಕಾಏಕಿ ತುಂಡಾದ ಪರಿಣ
ಘಟನೆ


ವಿಜಯಪುರ, 18 ಜುಲೈ (ಹಿ.ಸ.)

ಆ್ಯಂಕರ್ :

ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣ ದಾಂಡೇಲಿಯ ಸ್ಟರ್ಲಿಂಗ್ ರಿವರ್ ರೆಸಾರ್ಟ್ನಲ್ಲಿ ಜಿಪ್ಲೈನ್ ಸಾಹಸ ಕ್ರೀಡೆಯಲ್ಲಿ ಭಾಗವಹಿಸಿದ್ದ ವಿಜಯಪುರದ ಪ್ರವಾಸಿಗ ಕುಬೇರ್ ಸುರಪುರ ಅವರು ಭೀಕರ ಅವಘಡಕ್ಕೆ ಒಳಗಾಗಿದ್ದಾರೆ.

ಜಿಪ್ಲೈನ್ ಕೇಬಲ್ ಏಕಾಏಕಿ ತುಂಡಾದ ಪರಿಣಾಮ ಅವರು ಸುಮಾರು 30ರಿಂದ 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

ಲಭ್ಯ ಮಾಹಿತಿಯ ಪ್ರಕಾರ, ದಾಂಡೇಲಿಗೆ ಪ್ರವಾಸಕ್ಕೆ ತೆರಳಿದ್ದ ಕುಬೇರ್ ಸುರಪುರ ಅವರು ಸಾಹಸ ಕ್ರೀಡೆಗಳಲ್ಲೊಂದಾದ ಜಿಪ್ಲೈನ್ನಲ್ಲಿ ಭಾಗವಹಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಜಿಪ್ಲೈನ್ ಮಧ್ಯಭಾಗಕ್ಕೆ ತಲುಪಿದಾಗ ಕೇಬಲ್ ತುಂಡಾದ ಪರಿಣಾಮ ಅವರು ನೇರವಾಗಿ ನೆಲಕ್ಕೆ ಬಿದ್ದಿದ್ದಾರೆ. ಅವಘಡದ ತೀವ್ರತೆಗೆ ಎರಡೂ ಕೈ ಹಾಗೂ ಎರಡೂ ಕಾಲುಗಳ ಎಲುಬುಗಳು ಮುರಿದಿದ್ದು, ನರಗಳಿಗೂ ಗಂಭೀರ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಅವಘಡ ಸಂಭವಿಸಿದ ತಕ್ಷಣ ಸ್ಥಳದಲ್ಲಿದ್ದ ಸಿಬ್ಬಂದಿ ಹಾಗೂ ಸಹಪ್ರವಾಸಿಗರು ಗಾಯಾಳುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಅವರ ಆರೋಗ್ಯ ಸ್ಥಿತಿಯನ್ನು ನಿಕಟವಾಗಿ ಪರಿಶೀಲಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆ ಮುಂದುವರಿದಿದೆ.

ಈ ದುರ್ಘಟನೆಯ ಸಂಪೂರ್ಣ ದೃಶ್ಯವನ್ನು ಕುಬೇರ್ ಸುರಪುರ ಅವರ ಸಹೋದರ ಪ್ರಶಾಂತ್ ಅವರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ದೃಶ್ಯವನ್ನು ಕಂಡ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ಸಾಹಸ ಕ್ರೀಡೆಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಪ್ರವಾಸಿ ತಾಣಗಳಲ್ಲಿ ಆಯೋಜಿಸಲಾಗುವ ಸಾಹಸ ಕ್ರೀಡೆಗಳಲ್ಲಿ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಪ್ಲೈನ್ ಸೇರಿದಂತೆ ಇಂತಹ ಚಟುವಟಿಕೆಗಳಿಗೆ ಬಳಸುವ ಕೇಬಲ್, ಸುರಕ್ಷತಾ ಉಪಕರಣಗಳು ಹಾಗೂ ತಾಂತ್ರಿಕ ವ್ಯವಸ್ಥೆಗಳ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಅವಘಡಕ್ಕೆ ನಿಖರ ಕಾರಣವೇನು, ತಾಂತ್ರಿಕ ದೋಷವೇ ಅಥವಾ ನಿರ್ವಹಣೆಯ ನಿರ್ಲಕ್ಷ್ಯವೇ ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದ್ದು, ಸಂಬಂಧಪಟ್ಟ ಅಧಿಕಾರಿಗಳು ಘಟನೆ ಕುರಿತು ಪರಿಶೀಲನೆ ನಡೆಸುವ ಸಾಧ್ಯತೆ ಇದೆ.

ಇನ್ನು ವಿಜಯಪುರದ ಕನಕದಾಸ ಬಡಾವಣೆ ಕುಬೇರ ಸುರಪುರ ಅವರ ನಿವಾಸದಲ್ಲಿ ಆತಂಕ ಮನೆ ಮಾಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande