ಗದಗ ವಿಧಾನಸಭಾ ಕ್ಷೇತ್ರದಲ್ಲಿ ಎಸ್ಐಆರ್ ಪ್ರಕ್ರಿಯೆ ಚುರುಕು
ಗದಗ, 18 ಜುಲೈ (ಹಿ.ಸ.) ಆ್ಯಂಕರ್:- ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯನ್ನು ನಿಖರ, ಪಾರದರ್ಶಕ ಹಾಗೂ ದೋಷರಹಿತಗೊಳಿಸುವ ಉದ್ದೇಶದಿಂದ ಕೈಗೊಂಡಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯ ಗದಗ ವಿಧಾನಸಭಾ ಮತಕ್ಷೇತ್ರದಲ್ಲಿ ಚುರುಕುಗೊಂಡಿದೆ. ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ
ಫೋಟೋ


ಗದಗ, 18 ಜುಲೈ (ಹಿ.ಸ.)

ಆ್ಯಂಕರ್:- ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯನ್ನು ನಿಖರ, ಪಾರದರ್ಶಕ ಹಾಗೂ ದೋಷರಹಿತಗೊಳಿಸುವ ಉದ್ದೇಶದಿಂದ ಕೈಗೊಂಡಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯ ಗದಗ ವಿಧಾನಸಭಾ ಮತಕ್ಷೇತ್ರದಲ್ಲಿ ಚುರುಕುಗೊಂಡಿದೆ. ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ್.ಓ.) ಮನೆ-ಮನೆಗೆ ತೆರಳಿ ಮತದಾರರ ಮಾಹಿತಿಯನ್ನು ಪರಿಶೀಲಿಸಿ ಎನ್ಯುಮರೇಷನ್ ಫಾರ್ಮಗಳನ್ನು ವಿತರಿಸುತ್ತಿದ್ದು, ಡಿಜಿಟಲೀಕರಣ ಕಾರ್ಯವೂ ಸಮಾನಾಂತರವಾಗಿ ವೇಗವಾಗಿ ನಡೆಯುತ್ತಿದೆ.

ಗದಗ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 2,33,829 ಮತದಾರರು ಮತದಾರರ ಪಟ್ಟಿಯಲ್ಲಿ ನೋಂದಾಯಿತರಾಗಿದ್ದು, ಕ್ಷೇತ್ರದಲ್ಲಿ 226 ಮತಗಟ್ಟೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿಯೊಂದು ಮತಗಟ್ಟೆ ವ್ಯಾಪ್ತಿಯಲ್ಲೂ ನಿಯೋಜಿಸಲಾದ ಬಿ.ಎಲ್.ಓ.ಗಳು ಮನೆ-ಮನೆಗೆ ತೆರಳಿ ಮತದಾರರನ್ನು ಭೇಟಿ ಮಾಡುತ್ತಿದ್ದಾರೆ. ಮತದಾರರ ಹೆಸರು, ವಿಳಾಸ, ಕುಟುಂಬದ ವಿವರಗಳು ಹಾಗೂ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಎನ್ಯುಮರೇಷನ್ ಫಾರ್ಮಗಳನ್ನು ವಿತರಿಸಲಾಗುತ್ತಿದೆ.

ಅಧಿಕೃತ ಮಾಹಿತಿಯ ಪ್ರಕಾರ, ಇದುವರೆಗೆ 2,33,829 ಎನ್ಯುಮರೇಷನ್ ಫಾರ್ಮಗಳನ್ನು ವಿತರಿಸುವ ಕಾರ್ಯ ಪೂರ್ಣಗೊಂಡಿದೆ. ಅಲ್ಲದೆ, ಸಂಗ್ರಹವಾಗಿರುವ ಮಾಹಿತಿಯನ್ನು ಆನ್ಲೈನ್ ವ್ಯವಸ್ಥೆಗೆ ದಾಖಲಿಸುವ ಪ್ರಕ್ರಿಯೆಯೂ ವೇಗವಾಗಿ ಸಾಗುತ್ತಿದ್ದು, 1,31,113 ಎನ್ಯುಮರೇಷನ್ ಫಾರ್ಮಗಳ ಡಿಜಿಟಲೀಕರಣ ಈಗಾಗಲೇ ಪೂರ್ಣಗೊಂಡಿದೆ. ಉಳಿದ ಫಾರ್ಮಗಳ ಡಿಜಿಟಲೀಕರಣ ಕಾರ್ಯವನ್ನು ಸಹ ಅಧಿಕಾರಿಗಳು ತ್ವರಿತಗತಿಯಲ್ಲಿ ಮುಂದುವರಿಸಿದ್ದಾರೆ.

ಚುನಾವಣಾ ಆಯೋಗದ ವೇಳಾಪಟ್ಟಿಯಂತೆ, ಆಗಸ್ಟ್ 8ರವರೆಗೆ ಬಿ.ಎಲ್.ಓ.ಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರಿಂದ ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ಪಡೆದುಕೊಳ್ಳಲಿದ್ದಾರೆ. ಆದ್ದರಿಂದ ಮತದಾರರು ಬಿ.ಎಲ್.ಓ.ಗಳಿಗೆ ಸಂಪೂರ್ಣ ಸಹಕಾರ ನೀಡಬೇಕು ಹಾಗೂ ಕೇಳಲಾಗುವ ಮಾಹಿತಿಯನ್ನು ನಿಖರವಾಗಿ ಒದಗಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ, ವಯಸ್ಸು ಅಥವಾ ಇತರ ವಿವರಗಳಲ್ಲಿ ಯಾವುದೇ ತಿದ್ದುಪಡಿ ಅಗತ್ಯವಿದ್ದರೆ, ಅದನ್ನು ಈ ಪ್ರಕ್ರಿಯೆಯಲ್ಲೇ ತಿಳಿಸುವಂತೆ ಸೂಚಿಸಲಾಗಿದೆ. ಇದರಿಂದ ಅಂತಿಮ ಮತದಾರರ ಪಟ್ಟಿ ಇನ್ನಷ್ಟು ನಿಖರವಾಗಲು ಸಹಕಾರಿಯಾಗಲಿದೆ. ಮತದಾರರು ತಮ್ಮ ಹೆಸರನ್ನು ಪರಿಶೀಲಿಸಿಕೊಂಡು ಯಾವುದೇ ಲೋಪದೋಷಗಳಿದ್ದರೆ ತಕ್ಷಣವೇ ಬಿ.ಎಲ್.ಓ. ಅಥವಾ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಲಾಗಿದೆ.

ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಮತದಾರರ ಪಟ್ಟಿಯ ಗುಣಮಟ್ಟವನ್ನು ಹೆಚ್ಚಿಸುವ ಪ್ರಮುಖ ಕಾರ್ಯಕ್ರಮವಾಗಿದ್ದು, ಚುನಾವಣೆಯ ವೇಳೆ ಅರ್ಹ ಪ್ರತಿಯೊಬ್ಬ ನಾಗರಿಕರಿಗೂ ಮತದಾನದ ಹಕ್ಕು ಸುಗಮವಾಗಿ ದೊರೆಯುವಂತೆ ಮಾಡುವ ಉದ್ದೇಶ ಹೊಂದಿದೆ. ಮನೆ-ಮನೆಗೆ ಭೇಟಿ, ಎನ್ಯುಮರೇಷನ್ ಫಾರ್ಮಗಳ ವಿತರಣೆ, ದಾಖಲೆಗಳ ಪರಿಶೀಲನೆ ಹಾಗೂ ಡಿಜಿಟಲೀಕರಣದಂತಹ ಹಂತಗಳ ಮೂಲಕ ಮತದಾರರ ಮಾಹಿತಿಯನ್ನು ಸಮಗ್ರವಾಗಿ ಪರಿಷ್ಕರಿಸಲಾಗುತ್ತಿದೆ.

ಗದಗ ವಿಧಾನಸಭಾ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳೂ ಆಗಿರುವ ಗದಗ ಉಪವಿಭಾಗಾಧಿಕಾರಿಗಳು ಪ್ರಕಟಣೆ ಹೊರಡಿಸಿ, ಎಸ್ಐಆರ್ ಪ್ರಕ್ರಿಯೆ ಯಶಸ್ವಿಯಾಗಿ ನಡೆಯುತ್ತಿದ್ದು, ಮತದಾರರು ಚುನಾವಣಾ ಸಿಬ್ಬಂದಿಗೆ ಅಗತ್ಯ ಸಹಕಾರ ನೀಡುವ ಮೂಲಕ ಪರಿಷ್ಕರಣೆ ಕಾರ್ಯವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande