
ಕೋಲಾರ,ಜುಲೈ ೧೮ (ಹಿ.ಸ.):
ಆ್ಯಂಕರ್ :ಕೋಲಾರ ಜಿಲ್ಲೆಯನ್ನು ರಾಜ್ಯದ ಪ್ರಥಮ 'ಕಾರ್ಬನ್ ಜಿಲ್ಲೆ' ಯನ್ನಾಗಿ ರೂಪಿಸುವ ಬೃಹತ್ ಯೋಜನೆಯೊಂದು ರೂಪಗೊಳ್ಳುತ್ತಿದೆ. ಕೃಷಿ ಅರಣ್ಯ ಬೆಳೆಸುವ ರೈತರಿಗೆ 'ಕಾರ್ಬನ್ ಕ್ರೆಡಿಟ್' ಮಾರಿ ಜಾಗತಿಕ ಮಾರುಕಟ್ಟೆಯಿಂದ ಹೆಚ್ಚುವರಿ ಆದಾಯ ತಂದುಕೊಡುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದು ಮುಖ್ಯಮಂತ್ರಿಯವರ ಸಲಹೆಗಾರರು (ಹವಾಮಾನ ಬದಲಾವಣೆ) ಹಾಗೂ ಕರ್ನಾಟಕ ಹವಾಮಾನ ರಾಯಭಾರಿಗಳಾದ ಉಪೇಂದ್ರ ತ್ರಿಪಾಠಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಈ ಯೋಜನೆಯನ್ನು ಕೇವಲ ಸರ್ಕಾರಿ ಕಾರ್ಯಕ್ರಮವನ್ನಾಗಿಸದೆ ರೈತರ ಪಾಲ್ಗೊಳ್ಳುವಿಕೆಯೊಂದಿಗೆ ಯಶಸ್ವಿಗೊಳಿಸಬೇಕು. ಜಿಲ್ಲೆಯಾದ್ಯಂತ ಕನಿಷ್ಠ ೧೦,೦೦೦ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಅರಣ್ಯವನ್ನು ಅಭಿವೃದ್ಧಿಪಡಿಸುವ ಲಾಭದಾಯಕ ಆರ್ಥಿಕ ಮಾದರಿಯನ್ನು ಸಿದ್ಧಪಡಿಸಬೇಕಿದೆ. ಕೇವಲ ಮಾವು ಬೆಳೆಯುವುದಷ್ಟೇ ಅಲ್ಲದೆ ತೇಗ, ಮಹಾಗನಿ, ಸಿಲ್ವರ್ ಓಕ್, ಬೇವು, ಹೊಂಗೆ ಮತ್ತು ಹಲಸು ಮುಂತಾದ ಮರಗಳನ್ನು ಬೆಳೆಸುವ ಮೂಲಕ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಾರ್ಬನ್ ಕ್ರೆಡಿಟ್ ಪಡೆಯಲು ಅವರನ್ನು ಉತ್ತೇಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇದರಿಂದ ಮಹಿಳೆಯರು, ರೈತರು ಹಾಗೂ ಸಾರ್ವಜನಿಕರಿಗೆ ಪ್ರಯೋಜನೆವಾಗಲಿದೆ. ಜೊತೆಗೆ ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆ, ಉದ್ಯೋಗಾವಕಾಶ ಹಾಗೂ ಪರಿಸರಮಟ್ಟ ಸುಧಾರಣೆಯಾಗಲಿದೆ ಎಂದರು.
ರೈತರು ತಾವು ಬೆಳೆಸಿದ ಮರಗಳ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಕಾರ್ಬನ್ ಕ್ರೆಡಿಟ್ ಮಾರಾಟ ಮಾಡಿ ಆರ್ಥಿಕ ಲಾಭ ಪಡೆಯಲಿದ್ದು, ಪ್ರತಿ ಕಾರ್ಬನ್ ಕ್ರೆಡಿಟ್ಗೆ ಕನಿಷ್ಠ ೧೫ ರಿಂದ ೨೦ ಯುರೋಗಳಷ್ಟು (ಅಂದಾಜು ೧೫೦೦ ರಿಂದ ೨೦೦೦ ರೂ.) ಬೆಲೆ ಸಿಗುವ ನಿರೀಕ್ಷೆಯಿದೆ ಎಂದು ಸಭೆಯಲ್ಲಿ ವಿವರಿಸಿದರು. ಕೇವಲ ಮರ ಬೆಳೆಸುವುದಷ್ಟೇ ಅಲ್ಲದೆ, ಹೈನುಗಾರಿಕೆ, ಡೈರಿ ಸೆಕ್ಟರ್, ಬಯೋಗ್ಯಾಸ್ ಹಾಗೂ ಸೌರಶಕ್ತಿ ಪಂಪ್ಸೆಟ್ಗಳ ಬಳಕೆಯಂತಹ ಸ್ವಯಂಪ್ರೇರಿತ ವಲಯಗಳಲ್ಲೂ ಕಾರ್ಬನ್ ಕ್ರೆಡಿಟ್ ಪಡೆಯುವ ಸಾಧ್ಯತೆಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಲಾಯಿತು. ಇದಲ್ಲದೆ, ಕಾರ್ಬನ್ ಕ್ರೆಡಿಟ್ ಲೆಕ್ಕಾಚಾರ ಮತ್ತು ಪರಿಶೀಲನೆಗಾಗಿ ಅಂತರರಾಷ್ಟ್ರೀಯ ಮಟ್ಟದ ಪ್ರಮಾಣೀಕರಣ ಸಂಸ್ಥೆಗಳನ್ನು ಜಿಲ್ಲೆಗೆ ಆಹ್ವಾನಿಸುವ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಹಾಗೂ ಮುಂದಿನ ರೂಪುರೇಷೆಗಳನ್ನು ಸಿದ್ಧಪಡಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೃಷಿ, ತೋಟಗಾರಿಕೆ ಮತ್ತು ಹವಾಮಾನ ಸಂಬAಧಿತ ವಿಭಾಗಗಳ ಸಂಬAಧಿತ ಅರಿತ ವ್ಯಕ್ತಿಗಳನ್ನೊಳಗೊಂಡ ಪ್ರಮುಖ ಸಮಿತಿಯೊಂದನ್ನು ರಚಿಸಲು ಸಭೆ ನಿರ್ಧರಿಸಲಾಯಿತು. ಸಮಿತಿ ರಚನೆಯಾದ ನಂತರ ಈ ಬಗ್ಗೆ ಚರ್ಚಿಸಿ, ಮುಂದಿನ ತಿಂಗಳ ವೇಳೆಗೆ ಮರುಸಭೆ, ಕಾರ್ಯಾಗಾರದ ಮೂಲಕ ರೈತರಿಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದರ ಬಗೆಗೆ ಸಹ ಚರ್ಚಿಸಲಾಯಿತು.
ಕಾರ್ಬನ್ ಜಿಲ್ಲೆಗಳಾಗಿ ಪರಿವರ್ತನೆಯಾದ ಜಿಲ್ಲೆಯೊಂದರಲ್ಲಿ ಉತ್ಪಾದವಾಗುವ ಇಂಘಾಲದ ಪ್ರಮಾಣವನ್ನು ಕನಿಷ್ಠ ಮಟ್ಟಕ್ಕೆ ಇಳಿಸಿ ಅಷ್ಟೇ ಪ್ರಮಾಣದ ಇಂಗಾಲವನ್ನು ಮರ-ಗಿಡಗಳು ಅಥವಾ ತಂತ್ರಜ್ಞಾನದ ಮೂಲಕ ಹೀರಿಕೊಳ್ಳುವಂತೆ ಮಾಡುವುವು ಇದರ ಉದ್ದೇಶ. ಜಾಗತಿಕ ತಾಪಮಾನ ಏರಿಕೆಯನ್ನು ತಡೆಯಲು ಜಿಲ್ಲಾ ಮಟ್ಟದಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಳ್ಳುವುದು, ಕಲ್ಲಿದ್ದಿಲಿನ ಮೇಲಿನ ಅವಲಂಬನೆ ಕಡಿಮೆ ಮಾಡಿ ಸೌರಶಕ್ತಿ ಬಳಕೆ ಹೆಚ್ಚಿಸುವುದು ಸಹ ಮುಖ್ಯವಾಗಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಎಂ. ಆರ್ ರವಿ, ಅಪರ ಜಿಲ್ಲಾಧಿಕಾರಿ ಎಸ್. ಎಂ. ಮಂಗಳ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ. ಕೆ. ರಮೇಶ್, ಕೃಷಿ ಉಪನಿರ್ದೇಶಕಿ ಮಂಜುಳ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಮೈಲಾರಪ್ಪ, ತೋಟಗಾರಿಕೆ ಅಪರ ನಿರ್ದೇಶಕರು ಡಾ. ಪಿ. ಎಂ. ಶೋಬರದ್ ರವಿಕುಮಾರ್ ಎಸ್. ಎ ಉಪನಿರ್ದೇಶಕ ಕುಮಾರಸ್ವಾಮಿ, ಸುಜಿತ್ ಎನ್. ಬಿ. ಸಂದೀಪ್ ವಿ., ಅರಣ್ಯ ಇಲಾಖೆ ಧನಲಕ್ಷ್ಮಿ ಕೆ. ವಿ.ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗಿರೀಶ್ ಎ. ಆರ್.ರೂಪೇಶ್ ಎನ್. ಬಿ. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಮೈಲಾರಪ್ಪ, ಜಿಲ್ಲಾ ಭೂ ವಿಜ್ಞಾನಿ ತಿಪ್ಪೆಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್