
ಬಾಗಲಕೋಟೆ, 18 ಜುಲೈ (ಹಿ.ಸ.):
ಆ್ಯಂಕರ್ : ಬಾಗಲಕೋಟೆ ತಾಲೂಕಿನ
ಬೆಣ್ಣೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಮುಳುಗಡೆ ಗ್ರಾಮಗಳ ಕೂಲಿ ಕಾರ್ಮಿಕರು ಉದ್ಯೋಗದ ಸಮಸ್ಯೆ ಕುರಿತು ಬಾಗಲಕೋಟೆ ಶಾಸಕ ಉಮೇಶ್ ಎಚ್. ಮೇಟಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯಿತಿಯಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಉದ್ಯೋಗ ನೀಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೆ ಕೆಲಸ ದೊರೆತಿಲ್ಲ ಎಂದು ಕೂಲಿ ಕಾರ್ಮಿಕರು ಶಾಸಕರ ಗಮನಕ್ಕೆ ತಂದರು. ಕೆಲಸದ ಕೊರತೆಯಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ಜೀವನೋಪಾಯಕ್ಕಾಗಿ ಬೇರೆ ಜಿಲ್ಲೆಗಳು ಹಾಗೂ ರಾಜ್ಯಗಳಿಗೆ ವಲಸೆ ಹೋಗುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಎಂದು ಕಾರ್ಮಿಕರು ಅಳಲು ತೋಡಿಕೊಂಡರು.
ಕಾರ್ಮಿಕರ ಸಮಸ್ಯೆಯನ್ನು ಆಲಿಸಿದ ಶಾಸಕ ಉಮೇಶ್ ಎಚ್. ಮೇಟಿ, ಬಡ ಕುಟುಂಬಗಳು ಉದ್ಯೋಗದ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಬಾರದು ಹಾಗೂ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಹೇಳಿದರು.
ತಕ್ಷಣವೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ ಅವರು, ನಿಯಮಾನುಸಾರ ಸಾಧ್ಯವಾದಷ್ಟು ಬೇಗ ಉದ್ಯೋಗ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸರ್ಕಾರದ ಮಾರ್ಗಸೂಚಿಯಂತೆ ಅರ್ಹ ಕಾರ್ಮಿಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ವಿಳಂಬವಾಗದಂತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಉಮೇಶ್ ಎಚ್. ಮೇಟಿ, ಬಡ ಕೂಲಿ ಕಾರ್ಮಿಕರ ಬದುಕು ಭದ್ರವಾಗಿರಬೇಕು. ಉದ್ಯೋಗದ ಕೊರತೆಯಿಂದ ಅವರು ತಮ್ಮ ಊರು ಬಿಟ್ಟು ವಲಸೆ ಹೋಗುವ ಪರಿಸ್ಥಿತಿ ಬರಬಾರದು. ಅವರಿಗೆ ಉದ್ಯೋಗದ ಅವಕಾಶ ಕಲ್ಪಿಸಲು ನನ್ನಿಂದ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮುಂದುವರಿಸುತ್ತೇನೆ. ಅಧಿಕಾರಿಗಳು ಸಹ ಮಾನವೀಯ ದೃಷ್ಟಿಯಿಂದ ಸಮಸ್ಯೆಯನ್ನು ಪರಿಗಣಿಸಿ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಹೇಳಿದರು.
ಶಾಸಕರ ಭರವಸೆಯಿಂದ ಕೂಲಿ ಕಾರ್ಮಿಕರು ಸಂತಸ ವ್ಯಕ್ತಪಡಿಸಿ, ತಮ್ಮ ಸಮಸ್ಯೆಗೆ ಸ್ಪಂದಿಸಿ ತಕ್ಷಣ ಕ್ರಮ ಕೈಗೊಳ್ಳಲು ಮುಂದಾದ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande