ಎನ್ಪಿಎಸ್ ಪ್ರಕ್ರಿಯೆ ಸರಳೀಕರಣಕ್ಕೆ ಎಐ ಬಳಕೆ: ಪಿಎಫ್ಆರ್ಡಿಎ ಅಧ್ಯಕ್ಷ
ಬೆಂಗಳೂರು, 18 ಜುಲೈ (ಹಿ.ಸ.): ಆ್ಯಂಕರ್:ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ ಅಂಗಸಂಸ್ಥೆಯಾದ ''ಸೃಷ್ಟಿ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿ'' ಮಾಹೆ ಬೆಂಗಳೂರು ಕ್ಯಾಂಪಸ್‌ನಲ್ಲಿ ಹಮ್
Design-Fintech' Conference


ಬೆಂಗಳೂರು, 18 ಜುಲೈ (ಹಿ.ಸ.):

ಆ್ಯಂಕರ್:ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ ಅಂಗಸಂಸ್ಥೆಯಾದ 'ಸೃಷ್ಟಿ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿ' ಮಾಹೆ ಬೆಂಗಳೂರು ಕ್ಯಾಂಪಸ್‌ನಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಅಂತರ್ಗತ, ಸುರಕ್ಷಿತ ಹಾಗೂ ಸುಸ್ಥಿರ ಹಣಕಾಸು ವ್ಯವಸ್ಥೆಗಳನ್ನು ರೂಪಿಸುವಲ್ಲಿ 'ವಿನ್ಯಾಸ-ಆಧಾರಿತ ನಾವೀನ್ಯತೆ'ಯ ಪಾತ್ರದ ಕುರಿತು ಈ ಸಮ್ಮೇಳನದಲ್ಲಿ ಬೆಳಕು ಚೆಲ್ಲಲಾಯಿತು.

ಎಸ್‌ಎಂಐನ 'ವಿನ್ಯಾಸ-ಚಾಲಿತ ನಾವೀನ್ಯತೆ ವಿಭಾಗ' ಹಾಗೂ 'ಇನ್‌ಸ್ಟಿಟ್ಯೂಷನ್ಸ್ ಇನ್ನೋವೇಶನ್ ಕೌನ್ಸಿಲ್' (ಐಐಸಿ) ಜಂಟಿಯಾಗಿ, ಉದಯೋನ್ಮುಖ ಆರ್ಥಿಕತೆಗಳಲ್ಲಿ ಫಿನ್‌ಟೆಕ್ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ವಿನ್ಯಾಸ-ಆಧಾರಿತ ನಾವೀನ್ಯತೆ ಎಂಬ ಶೀರ್ಷಿಕೆಯ ಅಡಿ ಈ ಸಮ್ಮೇಳನವನ್ನು ಆಯೋಜಿಸಿಲಾಗಿತ್ತು. ಆರ್ಥಿಕ ಸೇರ್ಪಡೆ, ಡಿಜಿಟಲ್ ಪಾವತಿಗಳು, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಹಣಕಾಸು ಸೇವೆಗಳು, ಗ್ರೀನ್ ಫಿನ್‌ಟೆಕ್, ಉದ್ಯಮಶೀಲತೆ ಮತ್ತು ನಾವೀನ್ಯತೆ-ಆಧಾರಿತ ನೀತಿ ನಿರೂಪಣೆ ಕುರಿತು ಚರ್ಚಿಸಲು ನೀತಿ ನಿರೂಪಕರು, ನಿಯಂತ್ರಕರು, ಸಂಶೋಧಕರು, ಉದ್ಯಮಿಗಳು, ಶಿಕ್ಷಣ ತಜ್ಞರು ಹಾಗೂ ವಿದ್ಯಾರ್ಥಿಗಳನ್ನು ಈ ವೇದಿಕೆ ಒಗ್ಗೂಡಿಸಿತ್ತು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್‌ಆರ್‌ಡಿಎ) ಅಧ್ಯಕ್ಷ ಎಸ್. ರಾಮನ್, “ವೈಯಕ್ತಿಕ ಹಣಕಾಸು ಮಾರ್ಗದರ್ಶನ ನೀಡುವ ಉದ್ದೇಶದಿಂದ ಪಿಎಫ್‌ಆರ್‌ಡಿಎ ಎಐ ಆಧಾರಿತ 'ಪಿಂಚಣಿ ಸಲಹಾ ವೇದಿಕೆ'ಯನ್ನು ಅಭಿವೃದ್ಧಿಪಡಿಸುತ್ತಿದೆ. ಭವಿಷ್ಯದಲ್ಲಿ ಈ ವೇದಿಕೆಯನ್ನು ವಿಮೆ ಮತ್ತು ಭದ್ರತೆಗಳಿಗೂ ವಿಸ್ತರಿಸಬಹುದು, ಇದರಿಂದ ನಾಗರಿಕರಿಗೆ ವಿಶ್ವಾಸಾರ್ಹ ಹಣಕಾಸು ಸಲಹೆಗಳು ಸುಲಭವಾಗಿ ಲಭ್ಯವಾಗಲಿವೆ ಎಂದು ತಿಳಿಸಿದರು.

“ನ್ಯಾಷನಲ್ ಪೆನ್ಷನ್ ಸಿಸ್ಟಮ್ (ಎನ್‌ಪಿಎಸ್‌) ನೋಂದಣಿ ಪ್ರಕ್ರಿಯೆ ಸರಳೀಕರಿಸುವ ಮೂಲಕ, ಅದರ ಆರಂಭಿಕ ಹಂತದಲ್ಲಿನ ಆಯ್ಕೆಗಳನ್ನು ಕಡಿಮೆ ಮಾಡಿ ಮರುವಿನ್ಯಾಸಗೊಳಿಸಲಾಗುತ್ತಿದೆ. ಜನರು ತಮ್ಮ ಆಯ್ಕೆಯ ಭಾಷೆಯಲ್ಲೇ ಸಲಹಾ ವ್ಯವಸ್ಥೆಗಳೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುವ 'ಬಹುಭಾಷಾ ಎಐ-ಆಧಾರಿತ ಹಣಕಾಸು ನೆರವಿಗೆ ಉತ್ತೇಜನ ನೀಡಲಾಗುತ್ತಿದೆ. ಜನರ ಆರ್ಥಿಕ ಮತ್ತು ಆರೋಗ್ಯ ಭದ್ರತೆಯನ್ನು ಬಲಪಡಿಸಲು ವಿನ್ಯಾಸಗೊಳಿಸಲಾದ ಪಿಂಚಣಿ ಮತ್ತು ಆರೋಗ್ಯ ವಿಮೆಯ ಸಂಯೋಜಿತ ಉತ್ಪನ್ನವಾದ 'ಎನ್‌ಪಿಎಸ್ ಸ್ವಾಸ್ಥ್ಯ' ಶೀಘ್ರದಲ್ಲೇ ಬಿಡುಗಡೆಯಾಗಲಿದೆʼ ಎಂದರು.

ಜವಾಬ್ದಾರಿಯುತ ನಾವೀನ್ಯತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಅವರು, ಡಿಜಿಟಲ್ ಹಣಕಾಸು ಸೇವೆಗಳಲ್ಲಿ ಜನರ ನಂಬಿಕೆ ವೃದ್ಧಿಸಲು ಪಾರದರ್ಶಕ ಮತ್ತು ಜವಾಬ್ದಾರಿಯುತ ಎಐ ಬಳಕೆಯನ್ನು ಪಿಎಫ್‌ಆರ್‌ಡಿಎ ಪ್ರೋತ್ಸಾಹಿಸುತ್ತಿದೆ. ವಿಶೇಷವಾಗಿ ಸ್ವಯಂ ಉದ್ಯೋಗಿಗಳು, ಗಿಗ್ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಹಣಕಾಸು ಉತ್ಪನ್ನಗಳು ಸರಳವಾಗಿ ಹಾಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಲು, ತಂತ್ರಜ್ಞಾನಕ್ಕೆ ಮಾನವ-ಕೇಂದ್ರಿತ ವಿನ್ಯಾಸದ ಸ್ಪರ್ಶ ನೀಡುವುದು ಅತ್ಯಗತ್ಯ. ದೇಶಾದ್ಯಂತ ಆರ್ಥಿಕ ಸೇರ್ಪಡೆಯನ್ನು ಬಲಪಡಿಸಲು ನಿಯಂತ್ರಕರು, ಶೈಕ್ಷಣಿಕ ವಲಯ, ವಿನ್ಯಾಸಕರು ಮತ್ತು ಸ್ಟಾರ್ಟ್‌ಅಪ್‌ಗಳ ನಡುವೆ ಹೆಚ್ಚಿನ ಸಹಯೋಗದ ಅಗತ್ಯವಿದೆ ಎಂದು ಕರೆ ನೀಡಿದರು.

ಮಾಹೆ ಬೆಂಗಳೂರು ಸಹ ಕುಲಪತಿ ಪ್ರೊ. ಮಧು ವೀರರಾಘವನ್ ತಮ್ಮ ವಿಚಾರಗಳನ್ನು ಹಂಚಿಕೊಂಡು, ಭಾರತದ ಫಿನ್‌ಟೆಕ್ ಕ್ಷೇತ್ರದ ಗುರಿಯು ಕೇವಲ ಹಣಕಾಸು ವಹಿವಾಟುಗಳ ವೇಗಕ್ಕೆ ಸೀಮಿತವಾಗಿರದೆ, ಜನರ ದೀರ್ಘಕಾಲೀನ ಆರ್ಥಿಕ ಭದ್ರತೆಯನ್ನು ಹೆಚ್ಚಿಸುವತ್ತ ಗಮನಹರಿಸಬೇಕು. ಎಲ್ಲರೂ ಧೈರ್ಯವಾಗಿ ಉಳಿತಾಯ, ಹೂಡಿಕೆ, ನಿವೃತ್ತಿ ಯೋಜನೆಗಳನ್ನು ರೂಪಿಸಿಕೊಳ್ಳಲು ನೆರವಾಗುವುದು ಅಗತ್ಯ. ಇದಕ್ಕಾಗಿ ಡಿಸೈನ್ ಥಿಂಕಿಂಗ್, ಜವಾಬ್ದಾರಿಯುತ ಎಐ ಬಳಕೆ ಮತ್ತು ಶಿಕ್ಷಣ ಸಂಸ್ಥೆಗಳು, ಉದ್ಯಮಗಳು ಹಾಗೂ ನಿಯಂತ್ರಕರ ನಡುವಿನ ಬಲವಾದ ಸಹಯೋಗ ಅತ್ಯಗತ್ಯ, ಎಂದು ಹೇಳಿದರು.

ಮಾಹೆ ಬೆಂಗಳೂರಿನ ಹೆಚ್ಚುವರಿ ರಿಜಿಸ್ಟ್ರಾರ್ ರಾಘವೇಂದ್ರ ಪ್ರಭು ಅವರು, ಆರ್ಥಿಕ ಸೇವೆಗಳನ್ನು ಹೆಚ್ಚು ಸುರಕ್ಷಿತ, ಕೈಗೆಟುಕುವ ಹಾಗೂ ಗ್ರಾಹಕರ ವಿಭಿನ್ನ ಅಗತ್ಯಗಳಿಗೆ ತ್ವರಿತವಾಗಿ ಸ್ಪಂದಿಸುವ ರೀತಿಯಲ್ಲಿ ರೂಪಿಸಲು 'ವಿನ್ಯಾಸ-ಆಧಾರಿತ ನಾವೀನ್ಯತೆ' ಎಷ್ಟು ಮುಖ್ಯ ಎಂಬುದರ ಕುರಿತು ಮಾತನಾಡಿದರು.

ಎಸ್‌ಎಂಐ ನಿರ್ದೇಶಕ ಅರಿಂದಮ್ ದಾಸ್ ಮಾತನಾಡಿ, ವಿನ್ಯಾಸ ಎಂಬುದು ಕೇವಲ ಅಂದಕ್ಕಾಗಿ ಅಲ್ಲ, ಅದು ಸಾಮಾಜಿಕ ಬದಲಾವಣೆಯ ಪ್ರಬಲ ಅಸ್ತ್ರ. ಎಐ ಕಾಲಮಾನದಲ್ಲಿ, ಜನರಿಗೆ ಒಳಿತು ಮಾಡುವಂತಹ, ವಿಶ್ವಾಸಾರ್ಹ ಹಾಗೂ ಸುಸ್ಥಿರವಾದ ಫಿನ್‌ಟೆಕ್ ಪರಿಹಾರಗಳನ್ನು ರೂಪಿಸಲು ವಿನ್ಯಾಸ-ಆಧಾರಿತ ನಾವೀನ್ಯತೆ ಹಾಗೂ ಉದ್ಯಮಶೀಲತೆ ಹೇಗೆ ಸಹಕಾರಿಯಾಗಬಲ್ಲದು ಎಂಬುದನ್ನು ಈ ಸಮ್ಮೇಳನದಲ್ಲಿ ಆಳವಾಗಿ ಚರ್ಚಿಸಲಾಯಿತು, ಎಂದು ತಿಳಿಸಿದರು.

ಐಐಎಸ್ಸಿ ಬೆಂಗಳೂರಿನ ಪ್ರೊ. ಎಂ.ಎಚ್. ಬಾಲಸುಬ್ರಹ್ಮಣ್ಯ, ಬಿಎಚ್‌ಯುನ ಪ್ರೊ. ಮನೀಶ್ ಅರೋರಾ, ಸ್ಕಾಟಿಯಾಬ್ಯಾಂಕ್‌ನ ಪ್ರಿಯಾ ಅಳಗರ್ಸಾಮಿ, ಟಿಸಿಎಸ್‌ನ ರಿಷಭ್ ರಿಷಿ, ಕೆನರಾ ಬ್ಯಾಂಕ್‌ನ ಶಿಬು ಸೆಬಾಸ್ಟಿಯನ್, ಐಐಎಂ ಬೆಂಗಳೂರಿನ ಅಕ್ಷಯ್ ಬಾಪಟ್ ಹಾಗೂ ಪೆನ್ಷನ್‌ಬಾಕ್ಸ್‌ನ ಕುಲದೀಪ್ ಪರಾಶರ್ ಸೇರಿದಂತೆ ಹಲವರು ಈ ಸಮ್ಮೇಳನಲ್ಲಿ ಪಾಲ್ಗೊಂಡಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande