ಕರವೇ ವತಿಯಿಂದ ಶಾಸಕ ಮೇಟಿಗೆ ಆಹ್ವಾನ – ಜು. 30ರಂದು ಡಾ. ನಾಗಲಕ್ಷ್ಮಿ ಚೌಧರಿ ಕಾರ್ಯಕ್ರಮ
ಬಾಗಲಕೋಟೆ, 18 ಜುಲೈ (ಹಿ.ಸ.) ಆ್ಯಂಕರ್ : ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಇದೇ ತಿಂಗಳ ಜುಲೈ 30, 2026ರಂದು ಬಾಗಲಕೋಟೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿರುವ ವಿಶೇಷ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ
ಕಾರ್ಯಕ್ರಮ


ಬಾಗಲಕೋಟೆ, 18 ಜುಲೈ (ಹಿ.ಸ.)

ಆ್ಯಂಕರ್ : ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಇದೇ ತಿಂಗಳ ಜುಲೈ 30, 2026ರಂದು ಬಾಗಲಕೋಟೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿರುವ ವಿಶೇಷ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಈ ಕಾರ್ಯಕ್ರಮಕ್ಕೆ ಖ್ಯಾತ ವಾಗ್ಮಿ ಹಾಗೂ ಸಾಮಾಜಿಕ ಚಿಂತಕರಾದ ಡಾ. ನಾಗಲಕ್ಷ್ಮಿ ಚೌಧರಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಬಾಗಲಕೋಟೆ ಶಾಸಕ ಉಮೇಶ ಎಚ್. ಮೇಟಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಪದಾಧಿಕಾರಿಗಳು ಅಧಿಕೃತ ಆಹ್ವಾನ ಪತ್ರವನ್ನು ನೀಡಿ ಆತ್ಮೀಯವಾಗಿ ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ದೇಶ, ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ವಿವಿಧ ಚಟುವಟಿಕೆಗಳು ಹಾಗೂ ಯುವಜನರಲ್ಲಿ ಕನ್ನಡ ಭಾಷೆ, ನಾಡು-ನುಡಿ, ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳ ಬಗ್ಗೆ ಅರಿವು ಬೆಳೆಸುವ ಕಾರ್ಯಕ್ರಮಗಳ ಕುರಿತು ಶಾಸಕರಿಗೆ ವಿವರಿಸಲಾಯಿತು.

ಆಹ್ವಾನ ಸ್ವೀಕರಿಸಿದ ಶಾಸಕ ಉಮೇಶ ಎಚ್. ಮೇಟಿ ಅವರು, ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯವನ್ನು ಶ್ಲಾಘಿಸಿ, ಕಾರ್ಯಕ್ರಮ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ತಮ್ಮ ವೇಳಾಪಟ್ಟಿಗೆ ಅನುಗುಣವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾ ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.

ಜುಲೈ 30ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಡಾ. ನಾಗಲಕ್ಷ್ಮಿ ಚೌಧರಿ ಅವರ ಉಪನ್ಯಾಸವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande