ಇಂದು ದೇಶದ ಮೊದಲ ಖಾಸಗಿ ಉಪಗ್ರಹ ಉಡಾವಣೆ
ಶ್ರೀಹರಿಕೋಟಾ, 18 ಜುಲೈ (ಹಿ.ಸ.): ಆ್ಯಂಕರ್: ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಲಿರುವ ದೇಶದ ಮೊದಲ ಖಾಸಗಿ ಉಪಗ್ರಹ ಉಡಾವಣೆ ಇಂದು ನಡೆಯಲಿದೆ. ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯು ತನ್ನ ಸ್ವದೇಶಿ ''ವಿಕ್ರಮ್-1'' ಉಡಾವಣಾ ವಾಹಕದ ಮೂಲಕ ಬೆಳಿಗ್ಗೆ 11.30 ಗಂಟೆಗ
ವಿಕ್ರಮ್ ೧ ಉಪಗ್ರಹ


ಶ್ರೀಹರಿಕೋಟಾ, 18 ಜುಲೈ (ಹಿ.ಸ.):

ಆ್ಯಂಕರ್:

ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಲಿರುವ ದೇಶದ ಮೊದಲ ಖಾಸಗಿ ಉಪಗ್ರಹ ಉಡಾವಣೆ ಇಂದು ನಡೆಯಲಿದೆ. ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯು ತನ್ನ ಸ್ವದೇಶಿ 'ವಿಕ್ರಮ್-1' ಉಡಾವಣಾ ವಾಹಕದ ಮೂಲಕ ಬೆಳಿಗ್ಗೆ 11.30 ಗಂಟೆಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸುವ ಐತಿಹಾಸಿಕ ಪ್ರಯತ್ನ ನಡೆಸಲಿದೆ.

ಭಾರತದ ಖಾಸಗಿ ಸಂಸ್ಥೆಯೊಂದು ತಾನೇ ಅಭಿವೃದ್ಧಿಪಡಿಸಿದ ಉಡಾವಣಾ ವಾಹಕದ ಮೂಲಕ ಉಪಗ್ರಹವನ್ನು ಭೂಮಿಯ ಕಕ್ಷೆಗೆ ಸೇರಿಸಲು ಮುಂದಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಡಾ. ವಿಕ್ರಮ್ ಸಾರಾಭಾಯಿ ಅವರ ಗೌರವಾರ್ಥ ಈ ರಾಕೆಟ್‌ಗೆ 'ವಿಕ್ರಮ್-1' ಎಂದು ಹೆಸರು ನೀಡಲಾಗಿದೆ.

24 ಮೀಟರ್ ಉದ್ದದ ವಿಕ್ರಮ್-1 ಸಣ್ಣ ಉಪಗ್ರಹಗಳ ಉಡಾವಣೆಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಸಂಪೂರ್ಣ ಕಾರ್ಬನ್ ಸಂಯುಕ್ತ ರಚನೆಯಿಂದ ನಿರ್ಮಾಣವಾಗಿರುವ ಈ ರಾಕೆಟ್ ಕಡಿಮೆ ತೂಕ ಮತ್ತು ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿದೆ. ಕಾರ್ಬನ್ ಫೈಬರ್ ಉಕ್ಕಿಗಿಂತ ಸುಮಾರು ಐದು ಪಟ್ಟು ಹಗುರವಾಗಿರುವುದರಿಂದ ಉಡಾವಣಾ ಸಾಮರ್ಥ್ಯ ಹೆಚ್ಚುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಈ ರಾಕೆಟ್‌ನಲ್ಲಿ ಮೂರು ಘನ ಇಂಧನ ಹಂತಗಳಿದ್ದು, ಮೇಲ್ಭಾಗದಲ್ಲಿ ಕಕ್ಷೆ ಹೊಂದಾಣಿಕೆ ಘಟಕವನ್ನು ಅಳವಡಿಸಲಾಗಿದೆ. ಇದರ ನೆರವಿನಿಂದ ಒಂದೇ ಉಡಾವಣೆಯಲ್ಲಿ ಹಲವು ಉಪಗ್ರಹಗಳನ್ನು ಬೇರೆ ಬೇರೆ ಕಕ್ಷೆಗಳಲ್ಲಿ ಸ್ಥಾಪಿಸಬಹುದಾಗಿದೆ. ವಿಕ್ರಮ್-1 ರಾಕೆಟ್ 450 ಕಿಲೋಮೀಟರ್ ಎತ್ತರದ ಕಡಿಮೆ ಭೂ ಕಕ್ಷೆಗೆ 350 ಕಿಲೋಗ್ರಾಂವರೆಗೆ ಪೇಲೋಡ್ ಸಾಗಿಸುವ ಸಾಮರ್ಥ್ಯ ಹೊಂದಿದೆ.

ಈ ರಾಕೆಟ್‌ನಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಹಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಲಾಗಿದೆ. ಎಲ್ಲಾ ದ್ರವ ಇಂಧನ ಎಂಜಿನ್‌ಗಳನ್ನು ತ್ರಿಮಾನದ ಮುದ್ರಣ (3ಡಿ ಪ್ರಿಂಟಿಂಗ್) ತಂತ್ರಜ್ಞಾನದಿಂದ ನಿರ್ಮಿಸಲಾಗಿದ್ದು, ಇದರಿಂದ ಉತ್ಪಾದನಾ ಸಮಯ ಮತ್ತು ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ. ಅಲ್ಲದೆ ಸಂಸ್ಥೆಯು ಸ್ವದೇಶಿ ವಾಯುಚಾಲಿತ ಹಂತ ವಿಭಜನಾ ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸಿದೆ.

'ಮಿಷನ್ ಆಗಮನ'ದಡಿ ಹಲವು ಪೇಲೋಡ್‌ಗಳನ್ನು ಕಳುಹಿಸಲಾಗುತ್ತಿದೆ. ಬೆಂಗಳೂರಿನ ಕಾಸ್ಮೋಸ್ ಡೈಮಂಡ್ಸ್ ಸಂಸ್ಥೆ ಅಭಿವೃದ್ಧಿಪಡಿಸಿರುವ 'ಡೈಮಂಡ್ ಲೋಟಸ್' ಇದರಲ್ಲಿ ಪ್ರಮುಖವಾಗಿದೆ. ಜೊತೆಗೆ ಕಲಾವಿದ ಅಜಯ್ ಕುಮಾರ್ ಮಟ್ಟೇವಾಡ ಅವರು ರೂಪಿಸಿರುವ ಸೂಕ್ಷ್ಮ ಕಲಾಕೃತಿಯೂ ಬಾಹ್ಯಾಕಾಶಕ್ಕೆ ಸಾಗಲಿದೆ. ಇದರಲ್ಲಿ 18 ಕ್ಯಾರೆಟ್ ಚಿನ್ನದಿಂದ ತಯಾರಿಸಲಾದ ಪುಟ್ಟ ರಾಕೆಟ್ ಒಳಗೆ ಭಾರತ ರತ್ನ ಸರ್ ಸಿ.ವಿ. ರಮನ್, ಡಾ. ವಿಕ್ರಮ್ ಸಾರಾಭಾಯಿ ಹಾಗೂ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅತಿ ಸೂಕ್ಷ್ಮ ಪ್ರತಿಮೆಗಳಿವೆ. ಅವು ಅಕ್ಕಿಯ ಕಾಳಿಗಿಂತಲೂ ಚಿಕ್ಕದಾಗಿವೆ.

ಇದೇ ಮಿಷನ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈಬರಹದ 'ವಂದೇ ಮಾತರಂ' ಎಂದು ಬರೆದಿರುವ ಪೋಸ್ಟ್‌ಕಾರ್ಡ್‌ನನ್ನೂ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತಿದೆ.

ಇದುವರೆಗೆ ಭಾರತದಲ್ಲಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಕಾರ್ಯವನ್ನು ಮುಖ್ಯವಾಗಿ ಇಸ್ರೋ ನಡೆಸುತ್ತಿತ್ತು. 2018ರಲ್ಲಿ ಸ್ಥಾಪನೆಯಾದ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆ 2022ರ ನವೆಂಬರ್ 18ರಂದು 'ವಿಕ್ರಮ್-ಎಸ್' ಖಾಸಗಿ ಉಪಕಕ್ಷಾ ರಾಕೆಟ್‌ನ ಯಶಸ್ವಿ ಪರೀಕ್ಷೆ ನಡೆಸಿತ್ತು. ಅದು ಸುಮಾರು 88.8 ಕಿಲೋಮೀಟರ್ ಎತ್ತರ ತಲುಪಿ ನಿಗದಿತ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು.

ಭಾರತದ ಬಾಹ್ಯಾಕಾಶ ನೀತಿ-2023ರ ಮೂಲಕ ಖಾಸಗಿ ಸಂಸ್ಥೆಗಳಿಗೆ ಬಾಹ್ಯಾಕಾಶ ಕ್ಷೇತ್ರದ ಬಾಗಿಲು ತೆರೆಯಲಾಗಿದೆ. ಇನ್-ಸ್ಪೇಸ್ ಸೀಡ್ ಫಂಡ್ ಯೋಜೆ, ಅನುಮೋದನಾ ಪ್ರಕ್ರಿಯೆಯ ಸರಳೀಕರಣ ಹಾಗೂ 1,000 ಕೋಟಿ ರೂಪಾಯಿ ವೆಂಚರ್ ಕ್ಯಾಪಿಟಲ್ ನಿಧಿ ಸ್ಥಾಪನೆಯ ಮೂಲಕ ಬಾಹ್ಯಾಕಾಶ ಉದ್ಯಮಗಳಿಗೆ ಉತ್ತೇಜನ ನೀಡಲಾಗಿದೆ.

ಕೇಂದ್ರ ಸರ್ಕಾರದ ಮಾಹಿತಿಯಂತೆ, 2014ರಲ್ಲಿ ದೇಶದಲ್ಲಿ ಕೇವಲ ಒಂದು ಬಾಹ್ಯಾಕಾಶ ಸ್ಟಾರ್ಟ್‌ಅಪ್ ಇದ್ದರೆ, 2026ರ ಫೆಬ್ರವರಿ ವೇಳೆಗೆ ಈ ಸಂಖ್ಯೆ 400ಕ್ಕೂ ಅಧಿಕವಾಗಿದೆ. ಭಾರತೀಯ ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳಲ್ಲಿ ಇದುವರೆಗೆ 500 ಮಿಲಿಯನ್ ಅಮೆರಿಕನ್ ಡಾಲರ್‌ಗಿಂತ ಹೆಚ್ಚಿನ ಹೂಡಿಕೆ ಹರಿದುಬಂದಿದ್ದು, ಪಿಕ್ಸೆಲ್, ಧ್ರುವ ಸ್ಪೇಸ್, ಸ್ಕೈರೂಟ್ ಏರೋಸ್ಪೇಸ್, ಅಗ್ನಿಕುಲ್ ಕಾಸ್ಮೋಸ್ ಹಾಗೂ ಬೆಲ್ಲಾಟ್ರಿಕ್ಸ್ ಏರೋಸ್ಪೇಸ್ ಸಂಸ್ಥೆಗಳು ದೇಶದ ಹೊಸ ಬಾಹ್ಯಾಕಾಶ ಯುಗದ ಮುಂಚೂಣಿ ಸಂಸ್ಥೆಗಳಾಗಿ ಹೊರಹೊಮ್ಮಿವೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande