ಐಐಟಿ ಧಾರವಾಡದಲ್ಲಿ ಮೊದಲ ಗೌರವ ಡಾಕ್ಟರೇಟ್ ಪ್ರದಾನ; ಸುಧಾ ಮೂರ್ತಿಗೆ ಗೌರವ
ಧಾರವಾಡ, 18 ಜುಲೈ (ಹಿ.ಸ.): ಆ್ಯಂಕರ್: ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಧಾರವಾಡದ 7ನೇ ಘಟಿಕೋತ್ಸವ ಸಮಾರಂಭದಲ್ಲಿ ಮೊದಲ ಬಾರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದ್ದು, ಪದ್ಮಭೂಷಣ ಪುರಸ್ಕೃತ ಲೇಖಕಿ ಸುಧಾ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಒಟ್ಟು 31
ಐಐಟಿ ಘಟಿಕೋತ್ಸವ


ಧಾರವಾಡ, 18 ಜುಲೈ (ಹಿ.ಸ.):

ಆ್ಯಂಕರ್:

ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಧಾರವಾಡದ 7ನೇ ಘಟಿಕೋತ್ಸವ ಸಮಾರಂಭದಲ್ಲಿ ಮೊದಲ ಬಾರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದ್ದು, ಪದ್ಮಭೂಷಣ ಪುರಸ್ಕೃತ ಲೇಖಕಿ ಸುಧಾ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಒಟ್ಟು 313 ವಿದ್ಯಾರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಐಐಟಿ ದೆಹಲಿಯ ಪ್ರಾಧ್ಯಾಪಕ ಭೀಮ ಸಿಂಗ್, ವಿದ್ಯಾರ್ಥಿಗಳು ಕೇವಲ ಪದವಿ ಪಡೆಯುವುದಷ್ಟೇ ಗುರಿಯಾಗಿಸಿಕೊಳ್ಳದೆ, ಹೊಸ ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಸಿಕೊಂಡು ನಾವೀನ್ಯತೆ ಹಾಗೂ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು ಎಂದು ಕರೆ ನೀಡಿದರು. ಕೃತಕ ಬುದ್ಧಿಮತ್ತೆ, ನವೀಕರಿಸಬಹುದಾದ ಇಂಧನ, ವಿದ್ಯುತ್ ವಾಹನಗಳು ಸೇರಿದಂತೆ ಹೊಸ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಮುನ್ನಡೆಯಬೇಕಾದರೆ ಯುವ ಎಂಜಿನಿಯರ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಸುಧಾ ಮೂರ್ತಿ, ಯಾವುದೇ ಪದವಿ ಜೀವನದ ಅಂತಿಮ ಗುರಿಯಲ್ಲ. ಕಠಿಣ ಪರಿಶ್ರಮ, ಕೆಲಸದ ಮೇಲಿನ ನಂಬಿಕೆ ಮತ್ತು ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವವೇ ಯಶಸ್ಸಿನ ಗುಟ್ಟು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಮಾರಂಭದಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಅಮೋಘ ಆರ್. ರಾಷ್ಟ್ರಪತಿಗಳ ಚಿನ್ನದ ಪದಕ ಹಾಗೂ ಸಿದ್ಧಾರ್ಥ ಸಿಂಗ್ ನಿರ್ದೇಶಕರ ಚಿನ್ನದ ಪದಕ ಪಡೆದರು. ವಿವಿಧ ವಿಭಾಗಗಳ 10 ವಿದ್ಯಾರ್ಥಿಗಳಿಗೆ ಸಂಸ್ಥೆಯ ಬೆಳ್ಳಿ ಪದಕ ಪ್ರದಾನ ಮಾಡಲಾಯಿತು.

ಐಐಟಿ ಧಾರವಾಡ ಆಡಳಿತ ಮಂಡಳಿಯ ಅಧ್ಯಕ್ಷ ಶರದ್‌ಕುಮಾರ್ ಸರಾಫ್ ಅಧ್ಯಕ್ಷತೆ ವಹಿಸಿದ್ದರೆ, ನಿರ್ದೇಶಕ ವೆಂಕಪ್ಪಯ್ಯ ಆರ್. ದೇಸಾಯಿ ಸಂಸ್ಥೆಯ ವಾರ್ಷಿಕ ವರದಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಬೋಧಕ ವರ್ಗ, ವಿದ್ಯಾರ್ಥಿಗಳು, ಪಾಲಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande