

ಬಾಗಲಕೋಟೆ, 18 ಜುಲೈ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಜಮಖಂಡಿಯಿಂದ ಸಾವಳಗಿ ಮಾರ್ಗವಾಗಿ ಕಾರಿನಲ್ಲಿ ತೆರಳುತ್ತಿದ್ದ ಮೂವರು ಸ್ನೇಹಿತರ ಪ್ರಯಾಣ ಭೀಕರ ಅಪಘಾತದಲ್ಲಿ ಅಂತ್ಯಗೊಂಡಿದ್ದು, ಘಟನೆಯಲ್ಲಿ ಒಬ್ಬ ಯುವಕನ ಎಡಗೈ ಸಂಪೂರ್ಣವಾಗಿ ತುಂಡಾಗಿರುವ ದುರ್ಘಟನೆ ನಡೆದಿದೆ.
ಜಮಖಂಡಿಯಿಂದ ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಸವಾಲಿಗೆ ಕಡೆಗೆ ಕಾರಿನಲ್ಲಿ ಮೂವರು ಸ್ನೇಹಿತರು ಪ್ರಯಾಣಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ರಸ್ತೆ ವಿಭಜಕಕ್ಕೆ ಭಾರೀ ವೇಗದಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಹಲವು ಬಾರಿ ಪಲ್ಟಿ ಹೊಡೆದಿದೆ.
ಅಪಘಾತದ ವೇಳೆ ಡಿವೈಡರ್ನಲ್ಲಿದ್ದ ಕಬ್ಬಿಣದ ರಾಡ್ ಕಾರಿನೊಳಗೆ ನುಗ್ಗಿ, ರೋಹನ್ ವಾಗ್ಮೋಡೆ ಎಂಬ ಯುವಕನ ಎಡಗೈಗೆ ತೀವ್ರವಾಗಿ ತಗುಲಿದ್ದು, ಕೈ ಸಂಪೂರ್ಣವಾಗಿ ತುಂಡಾಗಿದೆ. ಅಪಘಾತದ ಭೀಕರತೆಗೆ ಸ್ಥಳದಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ.
ಗಾಯಾಳು ರೋಹನ್ ಅವರನ್ನು ತಕ್ಷಣ ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ತುಂಡಾದ ಎಡಗೈಯನ್ನೂ ಜೊತೆಯಲ್ಲೇ ಆಸ್ಪತ್ರೆಗೆ ತರಲಾಗಿದ್ದು, ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಇತರ ಇಬ್ಬರು ಸ್ನೇಹಿತರಿಗೆ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.
ಘಟನೆ ಕುರಿತು ಜಮಖಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande