
ಬಾಗಲಕೋಟೆ, 18 ಜುಲೈ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಉತ್ತಮ ಮಳೆಯಾಗಲಿ, ರೈತರ ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ ಹಾಗೂ ಗ್ರಾಮದಲ್ಲಿ ಸುಭಿಕ್ಷ ನೆಲೆಸಲಿ ಎಂಬ ಉದ್ದೇಶದಿಂದ ಗ್ರಾಮದೇವತೆ ದುರ್ಗಾದೇವಿಗೆ ಐದು ದಿನಗಳ ಕಾಲ ವಿಶೇಷ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಗ್ರಾಮದ ಹಿರಿಯರು, ಮುಖಂಡರು ಹಾಗೂ ದೇವಾಲಯದ ಆಡಳಿತ ಮಂಡಳಿಯವರು ಸಭೆ ನಡೆಸಿ ಈ ವಿಶೇಷ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ. ಅದರಂತೆ ಗ್ರಾಮದಲ್ಲಿ ಐದು ದಿನಗಳ ಕಾಲ ಪ್ರತಿನಿತ್ಯ ವಿಶೇಷ ಪೂಜೆ, ಆರತಿ, ಭಜನೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.
ಈ ಕಾರ್ಯಕ್ರಮದ ಅಂಗವಾಗಿ ಗ್ರಾಮದಾದ್ಯಂತ ಡಂಗೂರ ಸಾರುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದ್ದು, ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಾಯಿ ದುರ್ಗಾದೇವಿಯ ಆರಾಧನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ. ಡೊಳ್ಳು-ನಗಾರಿ ವಾದ್ಯಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ ದೇವಿಯ ಮಹಿಮೆ ಸಾರುವ ಕಾರ್ಯಕ್ರಮವೂ ಆಯೋಜಿಸಲಾಗಿದೆ.
ಮಳೆಯ ಕೊರತೆಯಿಂದ ರೈತರು ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭಕ್ತಿಭಾವದಿಂದ ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿದರೆ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಈ ಆಚರಣೆಯನ್ನು ಕೈಗೊಂಡಿದ್ದಾರೆ. ಪ್ರತಿವರ್ಷವೂ ಇಂತಹ ಧಾರ್ಮಿಕ ಆಚರಣೆಗಳು ಗ್ರಾಮದಲ್ಲಿ ನಡೆಯುತ್ತಿದ್ದು, ಈ ಬಾರಿಯೂ ಹೆಚ್ಚಿನ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.
ಗ್ರಾಮದ ಮಹಿಳೆಯರು ಸಂಪ್ರದಾಯಬದ್ಧ ಉಡುಗೆಯಲ್ಲಿ ಪೂಜೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪ್ರಾರ್ಥಿಸಲಿದ್ದು, ಐದು ದಿನಗಳ ಕಾಲ ನಡೆಯುವ ಈ ಧಾರ್ಮಿಕ ಕಾರ್ಯಕ್ರಮವು ಕಮತಗಿ ಪಟ್ಟಣದಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣ ಮಾಡಲಿದೆ.
ಗ್ರಾಮದಲ್ಲಿ ಉತ್ತಮ ಮಳೆ ಸುರಿದು ರೈತರ ಬದುಕು ಹಸನಾಗಲಿ, ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ ಹಾಗೂ ಎಲ್ಲರಿಗೂ ಸುಖ-ಶಾಂತಿ ನೆಲೆಸಲಿ ಎಂದು ಭಕ್ತರು ಗ್ರಾಮದೇವತೆ ದುರ್ಗಾದೇವಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande