
ಬಾಗಲಕೋಟೆ, 18 ಜುಲೈ (ಹಿ.ಸ.)
ಆ್ಯಂಕರ್ : ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಪ್ರಥಮ ಖಾಸಗಿ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ ಅನುಮತಿ ನೀಡಿರುವುದು ಉತ್ತರ ಕರ್ನಾಟಕದ ಶಿಕ್ಷಣ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲಾಗಿದ್ದು, ಈ ಐತಿಹಾಸಿಕ ನಿರ್ಧಾರಕ್ಕಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮಾಜಿ ಸಚಿವ ಎಸ್.ಆರ್. ಪಾಟೀಲ್ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಎಸ್.ಆರ್. ಪಾಟೀಲ್ ಅವರು, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಬಾಡಗಂಡಿಯಲ್ಲಿರುವ ಎಸ್.ಆರ್. ಪಾಟೀಲ್ ಶಿಕ್ಷಣ ಪ್ರತಿಷ್ಠಾನದ ಅಡಿಯಲ್ಲಿ ಬಿ.ಎಸ್ಸಿ. (ತೋಟಗಾರಿಕೆ) ಪದವಿ ಮಹಾವಿದ್ಯಾಲಯ ಆರಂಭಿಸಲು ಅನುಮತಿ ದೊರೆತಿರುವುದು ಅತ್ಯಂತ ಹೆಮ್ಮೆಯ ಹಾಗೂ ಅಭಿಮಾನದ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
ಈ ಮಹತ್ವದ ನಿರ್ಧಾರಕ್ಕೆ ಸಹಕರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ಉತ್ತರ ಕರ್ನಾಟಕದ ವಿದ್ಯಾರ್ಥಿಗಳ ಬಹುಕಾಲದ ಕನಸು ಇದೀಗ ನನಸಾಗುತ್ತಿದೆ ಎಂದು ಹೇಳಿದ್ದಾರೆ.
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಕಾರ್ಯಾರಂಭಗೊಳ್ಳಲಿರುವ ಈ ಮಹಾವಿದ್ಯಾಲಯವು ಉತ್ತರ ಕರ್ನಾಟಕದ 14 ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ತೋಟಗಾರಿಕೆ ಶಿಕ್ಷಣವನ್ನು ತಮ್ಮದೇ ಭಾಗದಲ್ಲಿ ಪಡೆಯುವ ಅವಕಾಶ ಕಲ್ಪಿಸಲಿದೆ. ಇದುವರೆಗೆ ತೋಟಗಾರಿಕೆ ಶಿಕ್ಷಣಕ್ಕಾಗಿ ದೂರದ ಪ್ರದೇಶಗಳಿಗೆ ತೆರಳಬೇಕಾಗಿದ್ದ ವಿದ್ಯಾರ್ಥಿಗಳಿಗೆ ಇದು ಮಹತ್ತರ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಇಂದಿನ ಕೃಷಿ ವ್ಯವಸ್ಥೆಯಲ್ಲಿ ತೋಟಗಾರಿಕೆ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದ್ದು, ವೈಜ್ಞಾನಿಕ ಕೃಷಿ, ಮೌಲ್ಯವರ್ಧನೆ, ರಫ್ತು, ಸಂಸ್ಕರಣೆ ಹಾಗೂ ಆಧುನಿಕ ತಂತ್ರಜ್ಞಾನಗಳ ಅಳವಡಿಕೆಗೆ ಪರಿಣಿತ ಮಾನವ ಸಂಪನ್ಮೂಲ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹೊಸ ಮಹಾವಿದ್ಯಾಲಯವು ಕೇವಲ ಪದವಿ ಶಿಕ್ಷಣಕ್ಕೆ ಸೀಮಿತವಾಗದೆ, ಸಂಶೋಧನೆ, ಕೌಶಲ್ಯಾಭಿವೃದ್ಧಿ, ನವೀನ ತಂತ್ರಜ್ಞಾನಗಳ ತರಬೇತಿ ಹಾಗೂ ರೈತ ಸ್ನೇಹಿ ಕಾರ್ಯಕ್ರಮಗಳ ಮೂಲಕ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿದೆ ಎಂದು ಎಸ್.ಆರ್. ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಾಡಗಂಡಿಯಲ್ಲಿ ಸ್ಥಾಪನೆಯಾಗಲಿರುವ ಎಸ್.ಆರ್. ಪಾಟೀಲ್ ತೋಟಗಾರಿಕೆ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಉತ್ತರ ಕರ್ನಾಟಕದ ಶಿಕ್ಷಣ ಕ್ಷೇತ್ರಕ್ಕೆ ಹೊಸ ಆಯಾಮ ನೀಡಲಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ, ಸಂಶೋಧನೆ ಹಾಗೂ ಉದ್ಯೋಗಮುಖಿ ಕೌಶಲ್ಯಗಳನ್ನು ಒದಗಿಸುವ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಮಹಾವಿದ್ಯಾಲಯದ ಮೂಲಕ ತೋಟಗಾರಿಕೆ ಕ್ಷೇತ್ರದಲ್ಲಿ ಆಧುನಿಕ ಸಂಶೋಧನೆಗೆ ಉತ್ತೇಜನ ದೊರೆಯಲಿದ್ದು, ರೈತರಿಗೆ ಹೊಸ ತಂತ್ರಜ್ಞಾನಗಳ ಪರಿಚಯ, ಬೆಳೆ ವೈವಿಧ್ಯತೆ, ಉತ್ಪಾದಕತೆ ಹೆಚ್ಚಳ ಹಾಗೂ ಕೃಷಿ ಆಧಾರಿತ ಉದ್ಯಮಗಳ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಮೊದಲ ಖಾಸಗಿ ತೋಟಗಾರಿಕೆ ಮಹಾವಿದ್ಯಾಲಯಕ್ಕೆ ಮಂಜೂರಾತಿ ದೊರಕಿಸಲು ಶ್ರಮಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು, ಶಿಕ್ಷಣ ತಜ್ಞರು ಹಾಗೂ ಸಹಕರಿಸಿದ ಎಲ್ಲರಿಗೂ ಎಸ್.ಆರ್. ಪಾಟೀಲ್ ಮತ್ತೊಮ್ಮೆ ಧನ್ಯವಾದಗಳು ಹಾಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande