ಆರೋಗ್ಯಕ್ಕೂ ರುಚಿಗೂ ಉತ್ತಮ ಆಯ್ಕೆ ನುಗ್ಗೆ ಸೊಪ್ಪಿನ ಚಟ್ನಿ
ಬೆಂಗಳೂರು, 18 ಜುಲೈ (ಹಿ.ಸ.): ಆ್ಯಂಕರ್:ನುಗ್ಗೆ ಸೊಪ್ಪು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದು, ದೇಹಕ್ಕೆ ಅಗತ್ಯವಾದ ವಿಟಮಿನ್, ಖನಿಜಾಂಶ ಮತ್ತು ಕಬ್ಬಿಣವನ್ನು ಒದಗಿಸುವ ಪ್ರಮುಖ ಆಹಾರವಾಗಿದೆ. ಈ ಸೊಪ್ಪಿನಿಂದ ತಯಾರಿಸುವ ಚಟ್ನಿ ರುಚಿಕರವಾಗಿರುವುದರ ಜೊತೆಗೆ ಆರೋಗ್ಯಕ್ಕೂ ಹಿತಕರವಾಗಿದೆ. ಬೇಕಾಗುವ ಸಾ
ನುಗ್ಗೆ ಸೊಪ್ಪಿನ ಚಟ್ನಿ


ಬೆಂಗಳೂರು, 18 ಜುಲೈ (ಹಿ.ಸ.):

ಆ್ಯಂಕರ್:ನುಗ್ಗೆ ಸೊಪ್ಪು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದು, ದೇಹಕ್ಕೆ ಅಗತ್ಯವಾದ ವಿಟಮಿನ್, ಖನಿಜಾಂಶ ಮತ್ತು ಕಬ್ಬಿಣವನ್ನು ಒದಗಿಸುವ ಪ್ರಮುಖ ಆಹಾರವಾಗಿದೆ. ಈ ಸೊಪ್ಪಿನಿಂದ ತಯಾರಿಸುವ ಚಟ್ನಿ ರುಚಿಕರವಾಗಿರುವುದರ ಜೊತೆಗೆ ಆರೋಗ್ಯಕ್ಕೂ ಹಿತಕರವಾಗಿದೆ.

ಬೇಕಾಗುವ ಸಾಮಗ್ರಿಗಳು

ಎರಡು ಕಪ್ ನುಗ್ಗೆ ಸೊಪ್ಪು, ಅರ್ಧ ಕಪ್ ತುರಿದ ತೆಂಗಿನಕಾಯಿ, ನಾಲ್ಕರಿಂದ ಐದು ಒಣ ಮೆಣಸಿನಕಾಯಿ, ನಾಲ್ಕರಿಂದ ಐದು ಬೆಳ್ಳುಳ್ಳಿ ಕಾಳು, ಒಂದು ಸಣ್ಣ ಈರುಳ್ಳಿ (ಐಚ್ಛಿಕ), ರುಚಿಗೆ ತಕ್ಕಷ್ಟು ಉಪ್ಪು, ಎರಡು ಟೀ ಸ್ಪೂನ್ ಎಣ್ಣೆ, ಅರ್ಧ ಟೀ ಸ್ಪೂನ್ ಸಾಸಿವೆ, ಒಂದು ಟೀ ಸ್ಪೂನ್ ಉದ್ದಿನ ಬೇಳೆ, ಕೆಲವು ಕರಿಬೇವು ಎಲೆಗಳು ಹಾಗೂ ಅಗತ್ಯವಿದ್ದಷ್ಟು ನೀರು.

ಮಾಡುವ ವಿಧಾನ

ಮೊದಲು ನುಗ್ಗೆ ಸೊಪ್ಪನ್ನು ಚೆನ್ನಾಗಿ ತೊಳೆದು ನೀರು ಬಸಿದುಕೊಳ್ಳಬೇಕು. ನಂತರ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಒಣ ಮೆಣಸಿನಕಾಯಿ, ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ಹುರಿಯಬೇಕು. ಬಳಿಕ ನುಗ್ಗೆ ಸೊಪ್ಪನ್ನು ಸೇರಿಸಿ ಮೂರುರಿಂದ ನಾಲ್ಕು ನಿಮಿಷ ಬೇಯಿಸಬೇಕು. ನಂತರ ತುರಿದ ತೆಂಗಿನಕಾಯಿ ಸೇರಿಸಿ ಒಂದು ನಿಮಿಷ ಕಲಸಿ ಒಲೆಯನ್ನು ಆರಿಸಬೇಕು.

ಮಿಶ್ರಣ ತಣ್ಣಗಾದ ಬಳಿಕ ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ರುಬ್ಬಬೇಕು. ಕೊನೆಯಲ್ಲಿ ಸಣ್ಣ ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಉದ್ದಿನ ಬೇಳೆ ಹಾಗೂ ಕರಿಬೇವು ತಾಳಿಸಿ ಚಟ್ನಿಗೆ ಸೇರಿಸಿದರೆ ರುಚಿಕರವಾದ ನುಗ್ಗೆ ಸೊಪ್ಪಿನ ಚಟ್ನಿ ಸಿದ್ಧವಾಗುತ್ತದೆ.

ಈ ಚಟ್ನಿಯನ್ನು ಬಿಸಿ ಅನ್ನ, ರಾಗಿ ಮುದ್ದೆ, ದೋಸೆ ಅಥವಾ ಇಡ್ಲಿಯೊಂದಿಗೆ ಸವಿಯಬಹುದು.

ಉಪಯುಕ್ತ ಸಲಹೆಗಳು

ತಾಜಾ ತೆಂಗಿನಕಾಯಿಯನ್ನು ಬಳಸಿದರೆ ಚಟ್ನಿಯ ರುಚಿ ಇನ್ನಷ್ಟು ಹೆಚ್ಚುತ್ತದೆ. ಖಾರವನ್ನು ತಮ್ಮ ರುಚಿಗೆ ಅನುಗುಣವಾಗಿ ಮೆಣಸಿನಕಾಯಿಯ ಪ್ರಮಾಣವನ್ನು ಬದಲಾಯಿಸಬಹುದು. ಚಟ್ನಿಯನ್ನು ಶೀತಲಪೆಟ್ಟಿಗೆಯಲ್ಲಿ ಇಟ್ಟು ಒಂದು ಅಥವಾ ಎರಡು ದಿನಗಳೊಳಗೆ ಬಳಸಿದರೆ ಉತ್ತಮ ರುಚಿ ದೊರೆಯುತ್ತದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande