ನರಗುಂದ ತಾಲೂಕಿನ ಬೆಳೆ ಹಾನಿ ವೀಕ್ಷಣೆ ಮಾಡಿದ ಡಿಸಿ
ಗದಗ, 18 ಜುಲೈ (ಹಿ.ಸ.) ಆ್ಯಂಕರ್: ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಹೆಸರು, ಉದ್ದು, ಶೇಂಗಾ, ಮೆಕ್ಕೆಜೋಳ, ಹತ್ತಿ,
ಫೋಟೋ


ಗದಗ, 18 ಜುಲೈ (ಹಿ.ಸ.)

ಆ್ಯಂಕರ್: ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಹೆಸರು, ಉದ್ದು, ಶೇಂಗಾ, ಮೆಕ್ಕೆಜೋಳ, ಹತ್ತಿ, ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳು ಒಣಗಲು ಆರಂಭಿಸಿರುವ ಹಿನ್ನೆಲೆ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿಯನ್ನು ಖುದ್ದಾಗಿ ಪರಿಶೀಲಿಸಿದರು.

2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಒಟ್ಟು 3,13,719 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದ್ದು, ಇದುವರೆಗೆ 2,57,401 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಪೂರ್ಣಗೊಂಡಿದೆ. ಆದರೆ ಮಳೆಯ ಕೊರತೆಯಿಂದ ಬಿತ್ತನೆಯಾದ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದ್ದು, ರೈತರು ಆತಂಕದಲ್ಲಿದ್ದಾರೆ.

ಅಧಿಕೃತ ಮಾಹಿತಿಯ ಪ್ರಕಾರ, ಜೂನ್ 1ರಿಂದ ಜುಲೈ 16ರವರೆಗೆ ಜಿಲ್ಲೆಯಲ್ಲಿ ವಾಡಿಕೆಯಂತೆ 121.4 ಮಿ.ಮೀ. ಮಳೆಯಾಗಬೇಕಾಗಿದ್ದರೆ, ಕೇವಲ 82.50 ಮಿ.ಮೀ. ಮಳೆಯಷ್ಟೇ ದಾಖಲಾಗಿದೆ. ಇದರಿಂದ ಶೇ. 32.04ರಷ್ಟು ಮಳೆಯ ಕೊರತೆ ಉಂಟಾಗಿದ್ದು, ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ನರಗುಂದ ತಾಲೂಕಿನ ಕಲಕೇರಿ ಹಾಗೂ ಹದಲಿ ಗ್ರಾಮಗಳಿಗೆ ಭೇಟಿ ನೀಡಿ, ರೈತರ ಜಮೀನುಗಳಲ್ಲಿ ಬೆಳೆದಿರುವ ಹೆಸರು, ಉದ್ದು, ಶೇಂಗಾ, ಮೆಕ್ಕೆಜೋಳ, ಈರುಳ್ಳಿ ಹಾಗೂ ಹತ್ತಿ ಬೆಳೆಗಳನ್ನು ಪರಿಶೀಲಿಸಿದರು. ಮಳೆಯ ಅಭಾವದಿಂದ ಬೆಳೆಗಳು ಒಣಗುತ್ತಿರುವುದು, ಎಲೆಗಳು ಬಾಡುತ್ತಿರುವುದು ಹಾಗೂ ಇಳುವರಿ ಕುಸಿತದ ಆತಂಕ ಎದುರಾಗಿರುವುದನ್ನು ಅವರು ಸ್ಥಳದಲ್ಲೇ ವೀಕ್ಷಿಸಿದರು.

ಪರಿಶೀಲನೆ ವೇಳೆ ಜಮೀನಿನಲ್ಲಿದ್ದ ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸಿದ ಜಿಲ್ಲಾಧಿಕಾರಿ, ಮಳೆಯ ಕೊರತೆಯಿಂದ ಎದುರಾಗಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಬೆಳೆ ನಷ್ಟ, ಹೆಚ್ಚುತ್ತಿರುವ ಕೃಷಿ ವೆಚ್ಚ, ಮರುಬಿತ್ತನೆಯ ಸಂಕಷ್ಟ ಹಾಗೂ ಭವಿಷ್ಯದ ಆತಂಕಗಳನ್ನು ರೈತರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ರೈತರ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿ, ಸರ್ಕಾರ ರೈತರ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿದ್ದು, ಅಗತ್ಯ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. ಜೊತೆಗೆ ಸಂಕಷ್ಟದಲ್ಲಿರುವ ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಧೈರ್ಯದಿಂದ ಇರಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರೈತರಿಗೆ ಬೆಳೆ ಸಮೀಕ್ಷೆ ಆಪ್ ಮೂಲಕ ತಮ್ಮ ಬೆಳೆಗಳ ಸಮೀಕ್ಷೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು. ಬೆಳೆ ಸಮೀಕ್ಷೆ ಪೂರ್ಣಗೊಂಡರೆ ಜಿಲ್ಲೆಯಲ್ಲಿ ಬೆಳೆದಿರುವ ವಿವಿಧ ಬೆಳೆಗಳ ವಿಸ್ತೀರ್ಣದ ನಿಖರ ಮಾಹಿತಿ ಸರ್ಕಾರದ ಬಳಿ ಲಭ್ಯವಾಗಲಿದ್ದು, ಪರಿಹಾರ, ವಿಮೆ ಹಾಗೂ ಇತರ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಇದು ನೆರವಾಗಲಿದೆ ಎಂದು ವಿವರಿಸಿದರು.

ಇದೇ ವೇಳೆ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಬೆಳೆ ಸಾಲ ಪಡೆದ ರೈತರು (ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಸಾಲ ಪಡೆದವರು) ಹೆಸರು (ಮಳೆಆಶ್ರಿತ) ಹಾಗೂ ಹತ್ತಿ (ಮಳೆಆಶ್ರಿತ ಮತ್ತು ನೀರಾವರಿ) ಬೆಳೆಗಳಿಗೆ ಜುಲೈ 22, 2026ರವರೆಗೆ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳುವ ಅವಕಾಶವಿದೆ ಎಂದು ತಿಳಿಸಿದರು. ಅರ್ಹ ರೈತರು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ಹಿನ್ನಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ನಿರಂತರವಾಗಿ ಕ್ಷೇತ್ರ ಮಟ್ಟದಲ್ಲಿ ರೈತರ ಸಂಪರ್ಕದಲ್ಲಿದ್ದು, ಬೆಳೆಗಳ ಸ್ಥಿತಿಗತಿಯನ್ನು ಮೇಲ್ವಿಚಾರಣೆ ಮಾಡುವಂತೆ ಸೂಚನೆ ನೀಡಲಾಗಿದೆ.

ಪರಿಶೀಲನಾ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ ಚೇತನಾ ಪಾಟೀಲ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು, ತಹಶೀಲ್ದಾರರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಮುಂದಿನ ಕೆಲ ದಿನಗಳಲ್ಲಿ ಸಮರ್ಪಕ ಮಳೆಯಾಗದಿದ್ದರೆ ಬೆಳೆ ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ರೈತರು ಸರ್ಕಾರದಿಂದ ಸೂಕ್ತ ನೆರವು ಹಾಗೂ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಇದೇ ವೇಳೆ ಬೆಳೆ ಸಮೀಕ್ಷೆ ಪೂರ್ಣಗೊಳಿಸುವುದು ಮತ್ತು ಬೆಳೆ ವಿಮೆಗೆ ನೋಂದಣಿ ಮಾಡಿಸಿಕೊಳ್ಳುವುದು ರೈತರ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande