
ಬಾಗಲಕೋಟೆ, 18 ಜುಲೈ (ಹಿ.ಸ.)
ಆ್ಯಂಕರ್ : ಕನ್ನಡ ರಂಗಭೂಮಿಯ ಶ್ರೀಮಂತ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಗವಿಸಿದ್ದೇಶ್ವರ ನಾಟ್ಯ ಸಂಘದ ವತಿಯಿಂದ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಇಂದಿನಿಂದ ಜನಪ್ರಿಯ ಸಾಮಾಜಿಕ ನಾಟಕ 'ಅಪ್ಪ ಚಿಂತ್ಯಾಗ ಮಗಳು ಸಂತ್ಯಾಗ' ಪ್ರದರ್ಶನ ಆರಂಭವಾಗಲಿದೆ.
ನಗರದ ಶಾಂತಿ ಸಾಗರ ಹೋಟೆಲ್ ಹಿಂಭಾಗದಲ್ಲಿನ ವಿಶಾಲ ಮೈದಾನದಲ್ಲಿ ಪ್ರತಿದಿನ ಎರಡು ಪ್ರದರ್ಶನಗಳನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ನಾಟಕಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗವಿಸಿದ್ದೇಶ್ವರ ನಾಟ್ಯ ಸಂಘದ ಸಂಘಟಕರು, ನಾಟಕವು ಇಂದಿನಿಂದ ಆರಂಭವಾಗಿ ಪ್ರತಿದಿನ ಮಧ್ಯಾಹ್ನ 3.15 ರಿಂದ 6.00 ಗಂಟೆಯವರೆಗೆ ಮೊದಲ ಪ್ರದರ್ಶನ ಹಾಗೂ ಸಂಜೆ 6.15 ರಿಂದ ರಾತ್ರಿ 9.00 ಗಂಟೆಯವರೆಗೆ ಎರಡನೇ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮನರಂಜನೆಯ ಪ್ರಭಾವದಿಂದ ರಂಗಭೂಮಿಯತ್ತ ಜನರ ಒಲವು ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ನಾಟಕಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವ ಪ್ರಯತ್ನವನ್ನು ಸಂಘ ನಿರಂತರವಾಗಿ ನಡೆಸುತ್ತಿದೆ.
ಜನರು ಕುಟುಂಬ ಸಮೇತ ಆಗಮಿಸಿ ನಾಟಕ ವೀಕ್ಷಿಸುವ ಮೂಲಕ ರಂಗಭೂಮಿಯನ್ನು ಪ್ರೋತ್ಸಾಹಿಸಿದರೆ ಮಾತ್ರ ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
'ಅಪ್ಪ ಚಿಂತ್ಯಾಗ ಮಗಳು ಸಂತ್ಯಾಗ' ನಾಟಕವು ಕುಟುಂಬ, ಸಮಾಜ ಮತ್ತು ಮಾನವೀಯ ಮೌಲ್ಯಗಳನ್ನು ಒಳಗೊಂಡ ಕಥಾಹಂದರ ಹೊಂದಿದ್ದು, ಎಲ್ಲ ವರ್ಗದ ಪ್ರೇಕ್ಷಕರ ಮನಗೆಲ್ಲುವಂತಹ ಮನರಂಜನೆ ಹಾಗೂ ಉತ್ತಮ ಸಂದೇಶವನ್ನು ಒಳಗೊಂಡಿದೆ. ನಾಟಕದಲ್ಲಿ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದು, ಸಂಗೀತ, ಹಾಸ್ಯ, ಭಾವನಾತ್ಮಕ ದೃಶ್ಯಗಳು ಹಾಗೂ ಸಾಮಾಜಿಕ ಸಂದೇಶಗಳು ಪ್ರೇಕ್ಷಕರನ್ನು ರಂಜಿಸಲಿವೆ ಎಂದು ಸಂಘಟಕರು ವಿವರಿಸಿದರು.
ರನ್ನನಾಡಿನ ಸಮಸ್ತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಂಗಭೂಮಿಗೆ ಬೆಂಬಲ ನೀಡಬೇಕು. ಸ್ಥಳೀಯ ಕಲಾವಿದರ ಪ್ರತಿಭೆಗೆ ಪ್ರೋತ್ಸಾಹ ನೀಡುವ ಮೂಲಕ ಕನ್ನಡ ನಾಟಕ ಪರಂಪರೆಯನ್ನು ಉಳಿಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಕಲಾವಿದರಾದ ಶ್ಯಾಮರಾಂ ಬೋಸಲೆ, ರಾಮಶೆಟ್ಟಿ ಕೊಡ್ಲಿ, ಮಾರುತಿ ನಾಯಕ ಹಾಗೂ ಯಮೊನಬಿ ಬಿಜಾಪುರ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಕಲಾವಿದರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande