ಭೋವಿ ಹೆಸರಿನ ದುರುಪಯೋಗ;ನೈಜ ಭೋವಿಗಳಿಗೆ ಅಡೆತಡೆ ಇಲ್ಲದೆ ಎಸ್ಸಿ ಪ್ರಮಾಣ ಪತ್ರ ನೀಡಿ: ಲಕ್ಷ್ಮಣ ಭೋವಿ ಆಗ್ರಹ
ವಿಜಯಪುರ, 18 ಜುಲೈ (ಹಿ.ಸ.) ಆ್ಯಂಕರ್ : ವಡ್ಡರ ಮತ್ತು ಭೋವಿ ಸಮುದಾಯಗಳು ಸಂಪೂರ್ಣವಾಗಿ ಪ್ರತ್ಯೇಕ ಜಾತಿಗಳಾಗಿದ್ದು, ಭೋವಿ ಸಮುದಾಯದ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಪರಿಣಾಮ ನೈಜ ಭೋವಿ ಸಮುದಾಯದವರಿಗೆ ಪರಿಶಿಷ್ಟ ಜಾತಿ (ಎಸ್ಸಿ) ಪ್ರಮಾಣ ಪತ್ರ ಪಡೆಯಲು ಗಂಭೀರ ತೊಂದರೆಗಳು ಎದುರಾಗುತ್ತಿವೆ
ಬೇಡಿಕೆ


ವಿಜಯಪುರ, 18 ಜುಲೈ (ಹಿ.ಸ.)

ಆ್ಯಂಕರ್ : ವಡ್ಡರ ಮತ್ತು ಭೋವಿ ಸಮುದಾಯಗಳು ಸಂಪೂರ್ಣವಾಗಿ ಪ್ರತ್ಯೇಕ ಜಾತಿಗಳಾಗಿದ್ದು, ಭೋವಿ ಸಮುದಾಯದ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಪರಿಣಾಮ ನೈಜ ಭೋವಿ ಸಮುದಾಯದವರಿಗೆ ಪರಿಶಿಷ್ಟ ಜಾತಿ (ಎಸ್ಸಿ) ಪ್ರಮಾಣ ಪತ್ರ ಪಡೆಯಲು ಗಂಭೀರ ತೊಂದರೆಗಳು ಎದುರಾಗುತ್ತಿವೆ ಎಂದು ಕರ್ನಾಟಕ ರಾಜ್ಯ ಭೋವಿ ಸಮಾಜದ ರಾಜ್ಯಾಧ್ಯಕ್ಷ ಲಕ್ಷ್ಮಣ ಭೋವಿ ಆರೋಪಿಸಿದರು.

ವಿಜಯಪುರ ನಗರದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋವಿ ಸಮುದಾಯವು ರಾಜ್ಯದ ಅತ್ಯಂತ ಹಿಂದುಳಿದ ಸಮುದಾಯಗಳಲ್ಲಿ ಒಂದಾಗಿದ್ದು, ಸಂವಿಧಾನ ಮತ್ತು ಸರ್ಕಾರ ನೀಡಿರುವ ಮೀಸಲಾತಿ ಹಾಗೂ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯುವ ಹಂತದಲ್ಲೇ ಹಲವು ಆಡಳಿತಾತ್ಮಕ ಸಮಸ್ಯೆಗಳು ಎದುರಾಗುತ್ತಿವೆ ಎಂದು ಹೇಳಿದರು.

ಕೆಲವು ತಾಲೂಕುಗಳಲ್ಲಿ ಬೆಸ್ತರ ಭೋವಿ ಎಂಬ ಕಾರಣ ನೀಡಿ ನೈಜ ಭೋವಿ ಸಮುದಾಯದ ಅರ್ಹ ಸದಸ್ಯರಿಗೆ ಎಸ್ಸಿ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇದರಿಂದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪ್ರವೇಶ, ವಿದ್ಯಾರ್ಥಿವೇತನ, ಸರ್ಕಾರಿ ಉದ್ಯೋಗ, ಮೀಸಲಾತಿ ಹಾಗೂ ವಿವಿಧ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ರೀತಿಯ ಗೊಂದಲದಿಂದ ಸಮಾಜದ ಯುವಜನರ ಭವಿಷ್ಯವೇ ಅತಂತ್ರವಾಗುತ್ತಿದ್ದು, ಅನೇಕ ಕುಟುಂಬಗಳು ನ್ಯಾಯಕ್ಕಾಗಿ ಸರ್ಕಾರಿ ಕಚೇರಿಗಳ ಸುತ್ತ ಅಲೆದಾಡುವ ಪರಿಸ್ಥಿತಿ ಎದುರಿಸುತ್ತಿವೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ಅವರು ಒತ್ತಾಯಿಸಿದರು.

ವಡ್ಡರ ಮತ್ತು ಭೋವಿ ಸಮುದಾಯಗಳು ಐತಿಹಾಸಿಕ, ಸಾಮಾಜಿಕ ಹಾಗೂ ಕಾನೂನುಬದ್ಧವಾಗಿ ವಿಭಿನ್ನ ಜಾತಿಗಳಾಗಿವೆ. ಆದ್ದರಿಂದ ಎರಡೂ ಸಮುದಾಯಗಳ ನಡುವೆ ಯಾವುದೇ ಗೊಂದಲ ಉಂಟಾಗದಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಬೇಕು. ನೈಜ ಭೋವಿ ಸಮುದಾಯದವರಿಗೆ ಯಾವುದೇ ಅಡೆತಡೆ ಇಲ್ಲದೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸಲು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಅವರು, ಕೆಲವು ವ್ಯಕ್ತಿಗಳು ಸುಳ್ಳು ದಾಖಲೆಗಳ ಆಧಾರದಲ್ಲಿ ಭೋವಿ ಸಮುದಾಯದ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಆರೋಪಿಸಿದರು. ವಿಶೇಷವಾಗಿ ಶಿವರಾಜ ತಂಗಡಗಿ ಸೇರಿದಂತೆ ಕೆಲವರು ತಪ್ಪು ದಾಖಲೆಗಳ ಮೂಲಕ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ದೂರಿದರು. ಇಂತಹ ಪ್ರಕರಣಗಳ ಕುರಿತು ಸರ್ಕಾರ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಭೋವಿ ಸಮಾಜದ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಕಸಿದುಕೊಳ್ಳಲು ಅವಕಾಶ ನೀಡುವುದಿಲ್ಲ. ಸಮುದಾಯದ ಗುರುತು, ಸಂವಿಧಾನಬದ್ಧ ಹಕ್ಕುಗಳು ಹಾಗೂ ಮೀಸಲಾತಿ ಸೌಲಭ್ಯಗಳನ್ನು ರಕ್ಷಿಸಲು ರಾಜ್ಯಾದ್ಯಂತ ಹೋರಾಟ ನಡೆಸಲು ಸಮಾಜ ಸಿದ್ಧವಿದೆ ಎಂದು ಲಕ್ಷ್ಮಣ ಭೋವಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಭೋವಿ ಸಮಾಜದ ಮುಖಂಡರು ಹಾಗೂ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande