
ಕೋಲಾರ, ಜುಲೈ ೧೮ (ಹಿ.ಸ):
ಆ್ಯಂಕರ್ : ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಪಂಚಾಯತ್, ಕೋಲಾರರವರ ಜಂಟಿ ಆಶ್ರಯದಲ್ಲಿ ಕೋಲಾರ ನಗರದ ಸಹ್ಯಾದ್ರಿ ಪದವಿ ಕಾಲೇಜಿನಲ್ಲಿ “ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ - ೨೦೨೬”ರ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಅರಿವು ಮೂಡಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ಜಿಲ್ಲೆಯಾದ್ಯಂತ ಎಸ್.ಐ.ಆರ್ ಸಂಬ0ಧ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕನೂ ಮತದಾನದ ಹಕ್ಕನ್ನು ಪಡೆಯುವುದು ಮತ್ತು ಚಲಾಯಿಸುವುದು ಅತ್ಯಂತ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಯುವ ಮತದಾರರನ್ನು, ಅದರಲ್ಲೂ ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳನ್ನು ಜಾಗೃತಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ೧೮ ವರ್ಷ ತುಂಬುತ್ತಿರುವ ಮತ್ತು ತುಂಬಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಹಾಗೂ ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಳ್ಳುವ ಕುರಿತು ಕಾರ್ಯಕ್ರಮದಲ್ಲಿ ಸವಿಸ್ತಾರವಾದ ಮಾಹಿತಿ ನೀಡಲಾಯಿತು.
“ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ - ೨೦೨೬”ರ ಸಂಬಂಧ, ಬೂತ್ ಮಟ್ಟದ ಅಧಿಕಾರಿಗಳು ನೀಡಿರುವ ಗಣತಿ ಫಾರಂಗಳಲ್ಲಿ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ ವಾಪಸ್ ನೀಡಬೇಕು. ಮತದಾರರ ಪಟ್ಟಿಯಲ್ಲಿ ಈಗಾಗಲೇ ನೊಂದಣಿಯಾದ ವಿದ್ಯಾರ್ಥಿಗಳು, ತಮ್ಮ ಮಾಹಿತಿಯನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು, ಅದನ್ನು ಸದ್ಬಳಿಕೆ ಮಾಡಿಕೊಳ್ಳಲು ತಿಳಿಸಲಾಯಿತು.
ಜಾಗೃತಿ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳಾದ ರವಿಚಂದ್ರ ಮಾತನಾಡಿ ಯುವ ಸಮುದಾಯವು ದೇಶದ ಪ್ರಜಾಪ್ರಭುತ್ವದ ಬಲವರ್ಧನೆಗೆ ಹೇಗೆ ಕೊಡುಗೆ ನೀಡಬಹುದು ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಮತದಾನ ಎಂಬುದು ಕೇವಲ ಹಕ್ಕಲ್ಲ, ಅದೊಂದು ಜವಾಬ್ದಾರಿ.ಅದನ್ನು ಸರಿಯಾದ ರೀತಿಯಲ್ಲಿ ಬಳಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಹೆಚ್.ಎನ್. ಮಂಜುನಾಥ್ ಸ್ವಾಮಿ ಮಾತಾನಾಡಿ, ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿದಂತೆ ಹಾಗೂ ಅನರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸದೆ ಎಚ್ಚರ ವಹಿಸುವ ಉದ್ದೇಶದಿಂದಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕೈಗೊಳ್ಳಲಾಗುತ್ತಿದೆ ಎಲ್ಲು ಸಕ್ರಿಯವಾಗಿ ಭಾಗವಹಿಸಲು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಹ್ಯಾದ್ರಿ ಕಾಲೇಜಿನಸಂಸ್ಥಾಪಕ ಅಧ್ಯಕ್ಷರಾದ ಉದಯ್ ಕುಮಾರ್ರವರು ಮಾತನಾಡಿ, ಇಂತಹ ಉಪಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಕ್ಕಾಗಿ ಜಿಲ್ಲಾಡಳಿತಕ್ಕೆ ಧನ್ಯವಾದ ಸಮರ್ಪಿಸಿ, ವಿದ್ಯಾರ್ಥಿಗಳು ಈ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನಪ್ರಾಂಶುಪಾಲರಾದ ವಿನಯ್ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ, ಜಿಲ್ಲಾ ಪಂಚಾಯತಿಯ ಸಿಬ್ಬಂದಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್