
ವಿಜಯಪುರ, 18 ಜುಲೈ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯಾದ್ಯಂತ ಮುಂಗಾರು ಮಳೆಯ ಕೊರತೆಯಿಂದ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಗೆ ತ್ವರಿತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಇಂದು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್ಎಲ್) ವಿಜಯಪುರ ಮುಖ್ಯ ಇಂಜಿನಿಯರ್ ಬಸವರಾಜ್ ಡಿ. ಅವರನ್ನು ಬಾಗಲಕೋಟೆ ಶಾಸಕ ಉಮೇಶ್ ಮೇಟಿ ಭೇಟಿ ಮಾಡಿ ಜಿಲ್ಲೆಯ ಪರಿಸ್ಥಿತಿ ಕುರಿತು ಸುದೀರ್ಘ ಚರ್ಚೆ ನಡೆಸಿ ಮನವಿ ಸಲ್ಲಿಸಿದರು.
ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬಾಗಲಕೋಟೆ ತಾಲೂಕಿನ ಬಹುತೇಕ ಹಳ್ಳ–ಕೆರೆಗಳು ಸಂಪೂರ್ಣವಾಗಿ ಬತ್ತಿದ್ದು, ಅಂತರ್ಜಲ ಮಟ್ಟವೂ ಗಣನೀಯವಾಗಿ ಕುಸಿದಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಜನರು ಹಾಗೂ ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಪೂರೈಕೆ ಅಸ್ತವ್ಯಸ್ತಗೊಂಡಿದ್ದು, ಜನರು ದೂರದ ಊರುಗಳಿಂದ ನೀರು ತರುವ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಯಿತು.
ಪ್ರಸ್ತುತ ಆಲಮಟ್ಟಿ ಜಲಾಶಯದಲ್ಲಿ ಸುಮಾರು 72 ಟಿಎಂಸಿ ನೀರು ಸಂಗ್ರಹವಿರುವುದರಿಂದ ನೀರಾವರಿ ಸಲಹಾ ಸಮಿತಿ ಸಭೆಯವರೆಗೆ ಕಾಯದೆ, ಮಾನವೀಯ ದೃಷ್ಟಿಯಿಂದ ತಿಮ್ಮಾಪುರ ಎತ್ತ ನೀರಾವರಿ ಯೋಜನೆಯ ಬಲದಂಡೆ ಕಾಲುವೆಗೆ ಕೂಡಲೇ ನೀರು ಹರಿಸಬೇಕು ಎಂದು ಒತ್ತಾಯಿಸಲಾಯಿತು. ಕಾಲುವೆಗೆ ನೀರು ಹರಿಸಿದರೆ ಬಾಗಲಕೋಟೆ ತಾಲೂಕಿನ ಅನೇಕ ಹಳ್ಳ–ಕೆರೆಗಳು ತುಂಬಿ, ಅಂತರ್ಜಲ ಮಟ್ಟ ಹೆಚ್ಚುವುದರ ಜೊತೆಗೆ ಜನರು ಮತ್ತು ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತವಲ್ಲದಿದ್ದರೂ ತಾತ್ಕಾಲಿಕ ಪರಿಹಾರ ದೊರೆಯಲಿದೆ ಎಂದು ಮನವರಿಕೆ ಮಾಡಿಕೊಡಲಾಯಿತು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯ ಇಂಜಿನಿಯರ್ ಬಸವರಾಜ್ ಡಿ. ಅವರು, ಪರಿಸ್ಥಿತಿಯ ಗಂಭೀರತೆಯನ್ನು ಅರಿತು ನಾಳೆಯಿಂದಲೇ ತಿಮ್ಮಾಪುರ ಎತ್ತ ನೀರಾವರಿ ಯೋಜನೆಯ ಬಲದಂಡೆ ಕಾಲುವೆಗೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದರು. ಈ ಭರವಸೆಯಿಂದ ಜಿಲ್ಲೆಯ ಜನರು, ರೈತರು ಹಾಗೂ ಜಾನುವಾರುಗಳಿಗೆ ಎದುರಾಗಿರುವ ಕುಡಿಯುವ ನೀರಿನ ಸಂಕಷ್ಟ ಶೀಘ್ರದಲ್ಲೇ ನಿವಾರಣೆಯಾಗುವ ವಿಶ್ವಾಸ ವ್ಯಕ್ತವಾಗಿದೆ.
ಬರ ಪರಿಸ್ಥಿತಿಯ ನಡುವೆಯೂ ಕುಡಿಯುವ ನೀರಿನ ಲಭ್ಯತೆ ಖಚಿತಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡಿರುವುದು ಸಾರ್ವಜನಿಕರಲ್ಲಿ ಆಶಾಭಾವನೆ ಮೂಡಿಸಿದೆ. ಕಾಲುವೆಗೆ ನೀರು ಹರಿಸುವ ಪ್ರಕ್ರಿಯೆ ಆರಂಭವಾದ ಬಳಿಕ ಜಿಲ್ಲೆಯ ವಿವಿಧ ಭಾಗಗಳ ಕೆರೆ-ಕಟ್ಟೆಗಳು ಹಾಗೂ ಜಲಮೂಲಗಳಿಗೆ ಜೀವಕಳೆ ಮರಳುವ ನಿರೀಕ್ಷೆಯಿದೆ.
ಈ ಸಂದರ್ಭದಲ್ಲಿ ಶಿವಾನಂದ ಅಬ್ಜಲ್ಪುರ್, ವೈ. ವೈ. ತಿಮ್ಮಾಪುರ, ಭೀಮನಗೌಡ ಬೂತಲದಿನ್ನಿ ಹಾಗೂ ಲೋಕನಗೌಡ ಪಾಟೀಲ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande