
ಗದಗ, 18 ಜುಲೈ (ಹಿ.ಸ.)
ಆ್ಯಂಕರ್:- ಮತದಾನವು ಭಾರತೀಯ ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ಹಕ್ಕಾಗಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನದಲ್ಲಿ ಗದಗ ಜಿಲ್ಲೆಯ ಸವಿತಾ ಸಮಾಜದ ಎಲ್ಲ ಬಾಂಧವರು ಸಕ್ರಿಯವಾಗಿ ಭಾಗವಹಿಸಿ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಾ ಎಚ್. ಹಡಪದ ಅವರು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ಸಮಾಜದ ಬಾಂಧವರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಕಟಣೆ ಹೊರಡಿಸಿರುವ ಅವರು, ಚುನಾವಣಾ ಆಯೋಗದ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯು ಪ್ರತಿಯೊಬ್ಬ ಮತದಾರರಿಗೂ ಅತ್ಯಂತ ಮಹತ್ವದ್ದಾಗಿದ್ದು, ಯಾವುದೇ ಕಾರಣಕ್ಕೂ ಈ ಅವಕಾಶವನ್ನು ನಿರ್ಲಕ್ಷಿಸಬಾರದು ಎಂದು ತಿಳಿಸಿದ್ದಾರೆ.
ಚುನಾವಣಾ ಆಯೋಗವು ಬೂತ್ ಮಟ್ಟದ ಅಧಿಕಾರಿಗಳ ಮನೆ-ಮನೆ ಭೇಟಿ ಕಾರ್ಯಕ್ರಮದ ಅವಧಿಯನ್ನು ಆಗಸ್ಟ್ 8, 2026ರವರೆಗೆ ವಿಸ್ತರಿಸಿರುವುದನ್ನು ಉಲ್ಲೇಖಿಸಿದ ಅವರು, ಸಮಾಜದ ಎಲ್ಲ ಸದಸ್ಯರು ಈ ಹೆಚ್ಚುವರಿ ಅವಧಿಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಬಿಎಲ್ಒಗಳು ಮನೆಗೆ ಭೇಟಿ ನೀಡಿದಾಗ ಅವರಿಗೆ ಅಗತ್ಯ ಸಹಕಾರ ನೀಡಬೇಕು. ಮತದಾರರ ವಿವರಗಳ ಪರಿಶೀಲನೆ, ಎನ್ಯುಮರೇಷನ್ ಫಾರ್ಮ್ ಭರ್ತಿ ಹಾಗೂ ದಾಖಲಾತಿಗಳ ಪರಿಶೀಲನೆಗೆ ಬೇಕಾದ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಸಹಕರಿಸಬೇಕು ಎಂದು ತಿಳಿಸಿದ್ದಾರೆ.
ಫಾರ್ಮ್ ಭರ್ತಿ ಮಾಡಲು ತೊಂದರೆ ಅನುಭವಿಸುವ ಹಿರಿಯ ನಾಗರಿಕರು, ಮಹಿಳೆಯರು, ಅಂಗವಿಕಲರು ಹಾಗೂ ಇತರರು ಯಾವುದೇ ಆತಂಕ ಪಡಬೇಕಿಲ್ಲ. ಬಿಎಲ್ಒಗಳೇ ಸ್ಥಳದಲ್ಲೇ ಫಾರ್ಮ್ ಭರ್ತಿ ಮಾಡಲು ಸಹಾಯ ಮಾಡಲಿದ್ದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಇತರ ಅಗತ್ಯ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸಬಹುದು ಎಂದು ಅವರು ತಿಳಿಸಿದ್ದಾರೆ.
ಇದರ ಜೊತೆಗೆ, ಫಾರ್ಮ್ ಭರ್ತಿ ಮಾಡಲು ಅಥವಾ ಪ್ರಕ್ರಿಯೆ ಅರ್ಥಮಾಡಿಕೊಳ್ಳಲು ಇನ್ನೂ ತೊಂದರೆಯಿದ್ದರೆ, ಗದಗ ಜಿಲ್ಲಾ ಸವಿತಾ ಸಮಾಜವು ಸಮಾಜದ ಬಾಂಧವರಿಗೆ ಉಚಿತ ಮನೆ-ಬಾಗಿಲಿನ ಸೇವೆ ಒದಗಿಸಲು ಮುಂದಾಗಿದೆ. ಇದಕ್ಕಾಗಿ ಸಮಾಜದ ವತಿಯಿಂದ ಸಹಾಯವಾಣಿ 9845650612 ಅನ್ನು ಪ್ರಕಟಿಸಲಾಗಿದ್ದು, ಈ ಸಂಖ್ಯೆಗೆ ಕರೆ ಮಾಡಿದರೆ ಸಮಾಜದ ಪ್ರತಿನಿಧಿಗಳು ಮನೆಗೆ ಭೇಟಿ ನೀಡಿ ಯಾವುದೇ ಶುಲ್ಕವಿಲ್ಲದೆ ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡಲು ನೆರವಾಗಲಿದ್ದಾರೆ ಎಂದು ಕೃಷ್ಣಾ ಎಚ್. ಹಡಪದ ತಿಳಿಸಿದ್ದಾರೆ.
ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಹಕ್ಕಾಗಿದ್ದು, ಯಾರೊಬ್ಬರೂ ಈ ಹಕ್ಕಿನಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಜಾಗೃತಿ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಸಮಾಜದ ಪ್ರತಿಯೊಬ್ಬರೂ ತಮ್ಮ ಕುಟುಂಬದ ಸದಸ್ಯರು, ಬಂಧುಗಳು ಹಾಗೂ ನೆರೆಹೊರೆಯವರಿಗೂ ಎಸ್ಐಆರ್ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿ, ಎಲ್ಲರೂ ಪರಿಷ್ಕರಣೆ ಕಾರ್ಯದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಮನವಿಗೆ ಗದಗ-ಬೆಟಗೇರಿ ಸವಿತಾ ಮತ್ತು ಮರಾಠ ಸಮುದಾಯಗಳ ಆರು ದೈವಗಳ ದೇವಸ್ಥಾನಗಳ ಅಧ್ಯಕ್ಷರು, ವಿವಿಧ ಪದಾಧಿಕಾರಿಗಳು, ಗದಗ ಜಿಲ್ಲೆಯ ಎಲ್ಲಾ ತಾಲೂಕುಗಳ ಸವಿತಾ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಮಾಜದ ಹಿರಿಯರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಯಶಸ್ವಿಯಾಗಲು ಎಲ್ಲ ಸಮಾಜ ಬಾಂಧವರು ಜವಾಬ್ದಾರಿಯಿಂದ ಸಹಕರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೊನೆಯಲ್ಲಿ ಜಿಲ್ಲಾಧ್ಯಕ್ಷ ಕೃಷ್ಣಾ ಎಚ್. ಹಡಪದ ಅವರು, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಬಿಎಲ್ಒಗಳಿಗೆ ಅಗತ್ಯ ಸಹಕಾರ ನೀಡಿ. ಯಾವುದೇ ತೊಂದರೆ ಇದ್ದರೆ ಸಮಾಜವನ್ನು ಸಂಪರ್ಕಿಸಿ. ಪ್ರತಿಯೊಬ್ಬ ಅರ್ಹ ಮತದಾರನ ಮತದಾನದ ಹಕ್ಕು ಸುರಕ್ಷಿತವಾಗಿರುವಂತೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸೋಣ ಎಂದು ಕರೆ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP