
ಜೀಂದ್ (ಹರಿಯಾಣ), 17 ಜುಲೈ (ಹಿ.ಸ.):
ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹರಿಯಾಣದ ಜೀಂದ್ ರೈಲು ನಿಲ್ದಾಣದಲ್ಲಿ ದೇಶದ ಮೊದಲ ಹೈಡ್ರೋಜನ್ ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಮೂಲಕ ಜೀಂದ್, ಸೋನಿಪತ್ ಹಾಗೂ ಹರಿಯಾಣದ ಹೆಸರು ಭಾರತೀಯ ರೈಲ್ವೆ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ ಸ್ಥಳವಾಗಿ ದಾಖಲಾಗಲಿದೆ ಎಂದು ಅವರು ಹೇಳಿದರು.
ಜೀಂದ್‌ನ ಏಕಲವ್ಯ ಕ್ರೀಡಾಂಗಣದಲ್ಲಿ ಸುಮಾರು ₹14,700 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, 19ನೇ ಶತಮಾನದಲ್ಲಿ ಉಗಿ ಎಂಜಿನ್, 20ನೇ ಶತಮಾನದಲ್ಲಿ ಡೀಸೆಲ್ ಮತ್ತು ವಿದ್ಯುತ್ ರೈಲುಗಳು ಗುರುತಾಗಿದ್ದರೆ, 21ನೇ ಶತಮಾನದಲ್ಲಿ ಹೈಡ್ರೋಜನ್ ರೈಲುಗಳು ಹೊಸ ಗುರುತಾಗಲಿವೆ ಎಂದು ಹೇಳಿದರು.
ಭಾರತದ ಈ ಹೈಡ್ರೋಜನ್ ರೈಲು ವಿಶ್ವದ ಅತ್ಯಂತ ಶಕ್ತಿಶಾಲಿ ಹಾಗೂ ಉದ್ದವಾದ ಹೈಡ್ರೋಜನ್ ಚಾಲಿತ ಪ್ರಯಾಣಿಕ ರೈಲುಗಳಲ್ಲಿ ಒಂದಾಗಿದ್ದು, 'ಮೇಕ್ ಇನ್ ಇಂಡಿಯಾ' ಅಭಿಯಾನದ ಯಶಸ್ಸಿನ ಪ್ರತೀಕವಾಗಿದೆ ಎಂದು ಪ್ರಧಾನಿ ಹೇಳಿದರು.
ಜೀಂದ್‌ನಿಂದ ಸಂಚರಿಸುವ 10 ಬೋಗಿಗಳ ಈ ರೈಲು 3,200 ಹಾರ್ಸ್‌ಪವರ್ ಸಾಮರ್ಥ್ಯದ ಪ್ರೋಪಲ್ಷನ್ ವ್ಯವಸ್ಥೆ ಹೊಂದಿದೆ. ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನದ ಮೂಲಕ ಹೈಡ್ರೋಜನ್‌ನಿಂದ ವಿದ್ಯುತ್ ಉತ್ಪಾದಿಸಿ ರೈಲು ಸಂಚರಿಸುವುದರಿಂದ ಕಾರ್ಬನ್ ಹೊರಸೂಸುವಿಕೆ ಇಲ್ಲದೆ ಕೇವಲ ನೀರಿನ ಆವಿಯಷ್ಟೇ ಹೊರಬಿಡುತ್ತದೆ. ಹೀಗಾಗಿ ಇದು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯಾಗಿದೆ ಎಂದು ವಿವರಿಸಿದರು.
ಕಳೆದ 12 ವರ್ಷಗಳಲ್ಲಿ ಭಾರತೀಯ ರೈಲ್ವೆಯಲ್ಲಿ ನಡೆದ ಪರಿವರ್ತನೆಯಿಂದ ದೇಶಕ್ಕೆ ಇಂಧನ ಭದ್ರತೆ ದೊರೆತಿದೆ ಎಂದು ಪ್ರಧಾನಿ ಹೇಳಿದರು. 2014ರ ಮೊದಲು ರೈಲ್ವೆ ಹೆಚ್ಚಿನ ಪ್ರಮಾಣದಲ್ಲಿ ಡೀಸೆಲ್ ಅವಲಂಬಿತವಾಗಿದ್ದರೆ, ಈಗ ದೇಶದ ಸುಮಾರು 99 ಶೇಕಡಾ ರೈಲು ಮಾರ್ಗಗಳ ವಿದ್ಯುದೀಕರಣ ಪೂರ್ಣಗೊಂಡಿದ್ದು, ಹರಿಯಾಣದಲ್ಲಿ ಶೇ.100 ವಿದ್ಯುದೀಕರಣ ಸಾಧಿಸಲಾಗಿದೆ ಎಂದು ತಿಳಿಸಿದರು. ಇದರಿಂದ ಜಾಗತಿಕ ತೈಲ ಸಂಕಷ್ಟದ ನಡುವೆಯೂ ದೇಶದ ರೈಲು ಸೇವೆಗಳಿಗೆ ಯಾವುದೇ ಅಡಚಣೆ ಉಂಟಾಗಿಲ್ಲ ಎಂದರು.
ಹೈಡ್ರೋಜನ್ ರೈಲುಗಳೊಂದಿಗೆ ಸಂಬಂಧಿಸಿದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹೊಸ ಕಾರ್ಖಾನೆಗಳ ಸ್ಥಾಪನೆಯಿಂದ ಹರಿಯಾಣದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಪ್ರಧಾನಿ ಹೇಳಿದರು. ಜೊತೆಗೆ ಸ್ವಚ್ಛತೆಯನ್ನು ಪ್ರತಿಯೊಬ್ಬರೂ ಜೀವನದ ಸಂಸ್ಕಾರವನ್ನಾಗಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಧಾನಿ ಸುಮಾರು ₹14,700 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಹಾಗೂ ಶಿಲಾನ್ಯಾಸ ನೆರವೇರಿಸಿದರು. ಇದರಲ್ಲಿ ₹12,470 ಕೋಟಿಗೂ ಅಧಿಕ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಸೇರಿವೆ. ದೆಹಲಿ–ಅಮೃತಸರ–ಕತ್ರಾ ಎಕ್ಸ್‌ಪ್ರೆಸ್‌ವೇಯ ಹರಿಯಾಣ ಭಾಗ, ಅಂಬಾಲಾ–ಕಾಲಾ ಅಂಬ ನಾಲ್ಕು ಪಥದ ಹೆದ್ದಾರಿ ಹಾಗೂ ಜೀಂದ್–ಗೋಹಾನಾ ಗ್ರೀನ್‌ಫೀಲ್ಡ್ ರಾಷ್ಟ್ರೀಯ ಹೆದ್ದಾರಿಯನ್ನು ಉದ್ಘಾಟಿಸಿದರು. ಹಾಂಸಿ–ಬರ್ವಾಲಾ ಬ್ರೌನ್‌ಫೀಲ್ಡ್ ಹೆದ್ದಾರಿ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದರು.
ಇದೇ ವೇಳೆ ಕುರುಕ್ಷೇತ್ರದ ಎಲಿವೇಟೆಡ್ ರೈಲು ಮಾರ್ಗ, ಭಿವಾನಿಯ ಪಂಡಿತ್ ನೆಕಿರಾಮ್ ಶರ್ಮಾ ಸರ್ಕಾರಿ ವೈದ್ಯಕೀಯ ಕಾಲೇಜು, ನಾರನೌಲಿನ ಮಹರ್ಷಿ ಚ್ಯವನ ವೈದ್ಯಕೀಯ ಕಾಲೇಜು ಹಾಗೂ ರಾವ್ ತುಲಾರಾಮ್ ಆಸ್ಪತ್ರೆಯನ್ನು ಉದ್ಘಾಟಿಸಿದರು. ಕುರುಕ್ಷೇತ್ರದಲ್ಲಿ ಸಿಖ್ ಸಂಗ್ರಹಾಲಯ ನಿರ್ಮಾಣಕ್ಕೂ ಶಿಲಾನ್ಯಾಸ ಮಾಡಿದರು.
ತಮ್ಮ ಇತ್ತೀಚಿನ ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಪ್ರವಾಸವನ್ನು ಉಲ್ಲೇಖಿಸಿದ ಪ್ರಧಾನಿ, ಕ್ರೀಡಾ ಉದ್ಯಮ, ಆಟಗಾರರ ತರಬೇತಿ ಮತ್ತು ಕ್ರೀಡಾ ಮೂಲಸೌಕರ್ಯ ಕ್ಷೇತ್ರದಲ್ಲಿ ಸಹಕಾರ ವಿಸ್ತರಿಸಲು ಒಪ್ಪಂದಗಳಾಗಿವೆ ಎಂದು ತಿಳಿಸಿದರು. ಹೊಸ ರಾಷ್ಟ್ರೀಯ ಕ್ರೀಡಾ ನೀತಿ ಹಾಗೂ 'ಖೇಲೋ ಇಂಡಿಯಾ' ಕಾರ್ಯಕ್ರಮದ ಮೂಲಕ ದೇಶದ ಕ್ರೀಡಾ ಪ್ರತಿಭೆಗಳಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.