ಇಂದು ಪ್ರಧಾನಿ ಮೋದಿ ಹರಿಯಾಣ, ಚಂಡೀಗಢ, ಪಂಜಾಬ್ ಪ್ರವಾಸ
ದೇಶದ ಮೊದಲ ಹೈಡ್ರೋಜನ್ ರೈಲಿಗೆ ಚಾಲನೆ; ₹24 ಸಾವಿರ ಕೋಟಿಗೂ ಅಧಿಕ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ
ಬಿಜೆಪಿ ಎಕ್ಸನಲ್ಲಿ ಹಂಚಿಕೊಂಡಿರುವ ಪ್ರಧಾನಿ ಕಾರ್ಯಕ್ರಮದ ವಿವರ


ನವದೆಹಲಿ, 17 ಜುಲೈ (ಹಿ.ಸ.):

ಆ್ಯಂಕರ್:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಹರಿಯಾಣ, ಚಂಡೀಗಢ ಹಾಗೂ ಪಂಜಾಬ್ ರಾಜ್ಯಗಳಿಗೆ ಭೇಟಿ ನೀಡಿ ₹24 ಸಾವಿರ ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಹರಿಯಾಣದ ಜಿಂದ್ ರೈಲು ನಿಲ್ದಾಣದಲ್ಲಿ ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಐತಿಹಾಸಿಕ ಹೆಜ್ಜೆ ಇಡಲಿದ್ದಾರೆ.

ಜಿಂದ್–ಸೋನಿಪತ್ ನಡುವೆ ಸಂಚರಿಸಲಿರುವ ಈ ರೈಲು ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನ ಆಧಾರಿತವಾಗಿದ್ದು, ಸಂಚಾರದ ವೇಳೆ ಕಾರ್ಬನ್ ಹೊರಸೂಸುವಿಕೆ ಶೂನ್ಯವಾಗಿರಲಿದೆ. ಹತ್ತು ಬೋಗಿಗಳನ್ನು ಹೊಂದಿರುವ ಈ ರೈಲು ಸ್ವದೇಶಿ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಭಾರತವನ್ನು ಹೈಡ್ರೋಜನ್ ರೈಲು ಸೇವೆ ಹೊಂದಿರುವ ವಿಶ್ವದ ಆಯ್ದ ರಾಷ್ಟ್ರಗಳ ಸಾಲಿಗೆ ಸೇರಿಸಲಿದೆ.

ಹರಿಯಾಣದಲ್ಲಿ ಸುಮಾರು ₹14,700 ಕೋಟಿ ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ, ₹12,470 ಕೋಟಿಗೂ ಅಧಿಕ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ದೆಹಲಿ–ಅಮೃತಸರ–ಕತ್ರಾ ಎಕ್ಸ್‌ಪ್ರೆಸ್‌ವೇಯ ಪ್ರಮುಖ ಭಾಗ, ಅಂಬಾಲಾ–ಕಾಲಾ ಅಂಬ್ ಹೆದ್ದಾರಿ, ಜಿಂದ್–ಗೋಹಾನಾ ಗ್ರೀನ್‌ಫೀಲ್ಡ್ ಹೆದ್ದಾರಿ ಸೇರಿದಂತೆ ಹಲವು ರಸ್ತೆ ಯೋಜನೆಗಳು ರಾಷ್ಟ್ರಕ್ಕೆ ಸಮರ್ಪಣೆಯಾಗಲಿವೆ. ಕುರುಕ್ಷೇತ್ರದ ಎಲಿವೇಟೆಡ್ ರೈಲು ಮಾರ್ಗ, ವೈದ್ಯಕೀಯ ಕಾಲೇಜುಗಳು ಹಾಗೂ ಸಿಖ್ ಸಂಗ್ರಹಾಲಯಕ್ಕೂ ಚಾಲನೆ ನೀಡಲಾಗುತ್ತದೆ.

ಬಳಿಕ ಚಂಡೀಗಢದಲ್ಲಿ ₹4,700 ಕೋಟಿಗೂ ಅಧಿಕ ಮೌಲ್ಯದ ಆರೋಗ್ಯ, ಶಿಕ್ಷಣ ಹಾಗೂ ರಸ್ತೆ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಪಿಜಿಐಎಂಇಆರ್‌ನಲ್ಲಿ ಸುಧಾರಿತ ತಾಯಿ–ಮಗು ಆರೈಕೆ ಕೇಂದ್ರ, ನರವಿಜ್ಞಾನ ಕೇಂದ್ರ ಹಾಗೂ 150 ಹಾಸಿಗೆಗಳ ಕ್ರಿಟಿಕಲ್ ಕೇರ್ ಬ್ಲಾಕ್‌ಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಜೊತೆಗೆ ಶಿಕ್ಷಣ ಸಂಸ್ಥೆಗಳ ವಸತಿ ಹಾಗೂ ರಸ್ತೆ ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ.

ಪಂಜಾಬ್‌ನ ಜಲಂಧರ್‌ನಲ್ಲಿ ₹5,470 ಕೋಟಿಗೂ ಅಧಿಕ ವೆಚ್ಚದ ರೈಲು ಮತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಅಮೃತ ಭಾರತ್ ನಿಲ್ದಾಣ ಯೋಜನೆಯಡಿ ಪುನರ್‌ಅಭಿವೃದ್ಧಿಗೊಂಡ 75 ರೈಲು ನಿಲ್ದಾಣಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದು, ಹೊಸ ರೈಲು ಮಾರ್ಗಗಳು ಹಾಗೂ ಎಕ್ಸ್‌ಪ್ರೆಸ್‌ವೇ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande