
ಕೋಲ್ಕತ್ತಾ, 17 ಜುಲೈ (ಹಿ.ಸ.):
ಆ್ಯಂಕರ್:ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಶಾಲಾ ವ್ಯಾನ್‌ಗೆ ಸ್ಥಳೀಯ ರೈಲು ಡಿಕ್ಕಿ ಹೊಡೆದ ಪರಿಣಾಮ ಮೂವರು ಶಾಲಾ ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ಮೂವರು ಮಕ್ಕಳು ಹಾಗೂ ವ್ಯಾನ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತವು ಬೆಳಿಗ್ಗೆ ಸುಮಾರು 7 ಗಂಟೆಗೆ ಆಜೀಮ್‌ಗಂಜ್–ಕಟ್ವಾ ರೈಲು ಮಾರ್ಗದ ಕರ್ಣಸುಬರ್ಣ ನಿಲ್ದಾಣ ಮತ್ತು ಗೋವಿಂದಪುರ ರೈಲು ಗೇಟ್ ನಡುವೆ ಸಂಭವಿಸಿದೆ. ಹಾವಡಾ ಕಡೆಗೆ ತೆರಳುತ್ತಿದ್ದ ರೈಲು ಹಾದುಹೋದ ಬಳಿಕ ರೈಲು ಗೇಟ್ ತೆರೆಯಲ್ಪಟ್ಟಿದ್ದರಿಂದ ಶಾಲಾ ವ್ಯಾನ್ ಹಳಿ ದಾಟಲು ಮುಂದಾಗಿದೆ. ಇದೇ ವೇಳೆ ವೇಗವಾಗಿ ಬಂದ ನಿಮತಿತಾ–ಕಟ್ವಾ ಸ್ಥಳೀಯ ರೈಲು ವ್ಯಾನ್‌ಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಡಿಕ್ಕಿಯ ತೀವ್ರತೆಗೆ ವ್ಯಾನ್ ಸಂಪೂರ್ಣ ಜಖಂಗೊಂಡಿದ್ದು, ಮೂವರು ಮಕ್ಕಳು ಹಾಗೂ ಸ್ಥಳೀಯ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಮುರ್ಶಿದಾಬಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ವೇಳೆ ಗೇಟ್‌ಮನ್ ಮದ್ಯದ ಅಮಲಿನಲ್ಲಿದ್ದರು ಎಂಬ ಆರೋಪ ಕೇಳಿಬಂದಿದ್ದರೂ, ಇದಕ್ಕೆ ಅಧಿಕೃತ ದೃಢೀಕರಣ ದೊರೆತಿಲ್ಲ. ಘಟನೆಯ ಕುರಿತು ರೈಲ್ವೆ ಮತ್ತು ಪೊಲೀಸ್ ಇಲಾಖೆ ತನಿಖೆ ಆರಂಭಿಸಿವೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.