

ಕೊಪ್ಪಳ, 16 ಜುಲೈ (ಹಿ.ಸ.)
ಆ್ಯಂಕರ್: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಕೊಪ್ಪಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೂಕನಪ್ಪಳಿ ಇವರ ಸಂಯುಕ್ತಾಶ್ರಯದಲ್ಲಿ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ರಾಷ್ಟ್ರೀಯ ಹಾವು ಕಡಿತ ನಿಯಂತ್ರಣ ಜಾಗೃತಿ ಕಾರ್ಯಕ್ರಮ ನಡೆಯಿತು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಗಂಗಮ್ಮ ಕೆ. ಅವರು ಮಾತನಾಡಿ, “18 ವರ್ಷ ವಯಸ್ಸಿನ ಮೇಲ್ಪಟ್ಟ ಮದುವೆ ಮತ್ತು ಮಕ್ಕಳ ನಡುವೆ ಕನಿಷ್ಠ 3 ವರ್ಷಗಳ ಅಂತರ ಕಾಪಾಡುವುದರಿಂದ ತಾಯಿ ಮತ್ತು ಮಕ್ಕಳ ಆರೋಗ್ಯ ವೃದ್ಧಿಸುವುದರೊಂದಿಗೆ ಅನಗತ್ಯ ಗರ್ಭಧಾರಣೆಗಳನ್ನು ತಡೆಗಟ್ಟಬಹುದು” ಎಂಬ ಘೋಷವಾಖ್ಯದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮದ ಉದ್ದೇಶ ಕುಟುಂಬ ಕಲ್ಯಾಣ ಯೋಜನೆಯ ವಿಧಾನಗಳ ಬಗ್ಗೆ ಅರ್ಹದಂಪತಿಗಳಿಗೆ ಅರಿವು ಮೂಡಿಸುವುದಾಗಿದೆ ಎಂದರು.
ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕನಿಷ್ಠ 3 ರಿಂದ 4 ವರ್ಷ ಅಂತರ ಕಾಪಾಡಲು ಕುಟುಂಬ ಕಲ್ಯಾಣ ಯೋಜನೆಯ ತಾತ್ಕಾಲಿಕ ಹೊಸ ವಿಧಾನಗಳಾದ 3 ತಿಂಗಳಿಗೊಂದು ಅಂತರ ಚುಚ್ಚುಮದ್ದು, ವಾರಕ್ಕೆ 2 ಬಾರಿ ಛಾಯಾ ನುಂಗುವ ಮಾತ್ರೆ, ಪ್ರಸವ ನಂತರ 5 ರಿಂದ 10 ವರ್ಷಗಳವರೆಗೆ ಕಾಪರ್-ಟಿ, ಪುರುಷರು ಬಳಸುವ ನಿರೋಧ್ ಬಳಸಿ, ಹೆರಿಗೆಗಳ ನಡುವೆ ಅಂತರ ಕಾಪಾಡಿಬೇಕು. ಅಂತರ ಕಾಪಾಡುವುದುರಿಂದ ತಾಯಿ ಮತ್ತು ಶಿಶುಗಳ ಆರೋಗ್ಯ ಸುರಕ್ಷಿತವಾಗಿಡಬಹುದು. ಮೇಲಿಂದ ಮೇಲೆ ಹೆರಿಗೆ ಆಗುವುದರಿಂದ ತಾಯಿಗೆ ಗರ್ಭಕೋಶದ ತೊಂದರೆ ಉಂಟಾಗುತ್ತದೆ.
ಆದ್ದರಿಂದ ಪ್ರತಿಯೊಬ್ಬ ಹೆರಿಗೆಯಾದ ಹೆಣ್ಣುಮಕ್ಕಳು ಯಾವುದಾದರೂ ಒಂದು ಕುಟುಂಬ ಕಲ್ಯಾಣ ಯೋಜನೆಗಳ ವಿಧಾನಗಳನ್ನ ಬಳಸುವುದರಿಂದ ಅಂತರ ಕಾಪಾಡಬಹುದು. ಹೆಣ್ಣಿರಲಿ-ಗಂಡಿರಲಿ ಮಗು ಒಂದು ಅಥವಾ ಎರಡು ಮಕ್ಕಳು ಆದ ಮೇಲೆ ಶಾಶ್ವತ ವಿಧಾನಗಳಾದ ಮಹಿಳೆಯರಿಗೆ ಉದರ ದರ್ಶಕ ಶಸ್ತ್ರಚಿಕಿತ್ಸೆ ಹಾಗೂ ಪುರುಷರಿಗೆ ಎನ್.ಎಸ್.ವಿ ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆ ನಂತರ ಅವರ ಖಾತೆಗೆ ಗೌರವಧನ ಜಮೆ ಮಾಡಲಾಗುತ್ತದೆ. ಇದರಿಂದ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಚಿಕ್ಕಸಂಸಾರ ಚೊಕ್ಕಸಂಸಾರ ಎಂಬುನ್ನು ಅರಿತುಕೊಂಡು ಎಲ್ಲರೂ ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಲ್ ವಿ ಸಜ್ಜನ್ ಅವರು ಮಾತನಾಡಿ, ಹಾವು ಕಡಿತದಿಂದ ಉಂಟಾಗುವ ಮರಣವನ್ನು ನಿಯಂತ್ರಿಸುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಭಾರತ ಹಳ್ಳಿಗಳ ದೇಶ ಶೇ. 70 ಕ್ಕಿಂತಲೂ ಹೆಚ್ಚು ಜನರು ಕೃಷಿಯಲ್ಲಿ ಅವಲಂಬಿತರಾಗಿದ್ದಾರೆ. ಭಾರತದಲ್ಲಿ ಪ್ರಮುಖ 4 ವಿಷಕಾರಿ ಹಾವುಗಳಾದ ನಾಗರಹಾವು, ಕಟ್ಟಾವು, ಕೊಳಕುಮಂಡಲ ಹಾವು ಹಾಗೂ ಗರಗಸ ಮಂಡಲ ಹಾವು ಕಡಿತದಿಂದ ಉಂಟಾಗುವ ಸಾವುಗಳಲ್ಲಿ 90% ಅಧಿಕ ಸಾವುಗಳಿಗೆ ಕಾರಣವಾಗುತ್ತವೆ.
ಹಾಗಾಗಿ ಈ 4 ಹಾವುಗಳ ಬಗ್ಗೆ ಎಚ್ಚರಿಗೆ ವಹಿಸಬೇಕು ನಾಗರಹಾವು ಬಿಟ್ಟು ಉಳಿತ 3 ವಿಷಕಾರಿ ಹಾವುಗಳು ರಾತ್ರಿವೇಳೆ ಹೆಚ್ಚು ಚಟುವಟಿಕೆಯಿಂದಿರುತ್ತವೆ. ರಾತ್ರಿವೇಳೆ ಹೊರಗಡೆ ಹೋಗುವಾಗ ಟಾರ್ಚ್ ಬಳಸಬೇಕು. ಮನೆ ಅಂಗಳವನ್ನು ಇಲಿ ಹೆಗ್ಗನಗಳಂತಹ ಹಾವುಗಳು ತಿನ್ನುವ ಜೀವಿಗಳಿಂದ ಮುಕ್ತವಾಗಿಸುವುದು. ಹಾವುಗಳು ತಿನ್ನುವ ಜೀವಿಗಳಿಂದ ಮುಕ್ತವಾಗಿಸುವುದು. ಮನೆಯಂಗಳ ಅಥವಾ ಹೊಲಗದ್ದೆಗಳಲ್ಲಿ ಸಾಮಾನ್ಯವಾಗಿ ತಿರುಗಾಡುವ ಸ್ಥಳಗಳಲ್ಲಿ ಗಿಡಗಂಟಿಗಳನ್ನು ಕಡಿದು ಸ್ವಚ್ಚವಾಗಿಟ್ಟುಕೊಳ್ಳುವುದು ಎಂದರು.
ಹಾವುಗಳಿರುವ ಸಾಧ್ಯತೆ ಹೆಚ್ಚಿರುವ ಸ್ಥಳಗಳಲ್ಲಿ ಕೆಲಸ ಮಾಡುವಾಗ ಶೂಗಳನ್ನು ಬಳಸುವುದು. ರಾತ್ರಿ ಮನೆಯ ಹೊರಗೆ ಹಾಗೂ ಹೊಲಗದ್ದೆಗಳಲ್ಲಿ ಮಲಗಬೇಕಾದಾಗ ನೆಲದಲ್ಲಿ ಮಲಗದೆ ಎತ್ತರ ಪ್ರದೇಶದ ಮಂಚ ಬಳಸುವುದು, ನೆಲದಲ್ಲಿ ಮಲಗಲೇ ಬೇಕೆಂದರೆ ಕಡ್ಡಾಯವಾಗಿ ಸೊಳ್ಳೆಪರದೆ ಬಳಸುವುದು ಹಾಗೂ ರೈತರು ಹೊಲದಲ್ಲಿ ದನ-ಕರಗಳಿಗೆ ಮೇವು ಹಾಗೂ ಹಸಿಹುಲ್ಲು ಕಿಳುವಾಗ ಕುಡುಗೊಲು ಬಳಸಬೇಕು.
ಒಂದು ವೇಳೆ ಹಾವು ಕಚ್ಚಿದರೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ 40 ನಿಮಿಷದೊಳಗಾಗಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಹಾವು ಕಡೆದ ವ್ಯಕ್ತಿಯನ್ನು ಸಮಾದಾನ ಪಡಿಸಿ, ಗಾಬರಿ ಪಡಿಸಬೇಡಿ. ಹಾವಿನಿಂದ ನಿಧಾನವಾಗಿ ದೂರ ಸರಿಯಿರಿ. ರಕ್ತಬಂಧಕಪಟ್ಟಿ ಕಟ್ಟಬೇಡಿ. ಹಾವು ಕಡಿತಕ್ಕೊಳಗಾದ ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಿ. ಗಾಯವನ್ನು ಕತ್ತರಿಸಬೇಡಿ, ಏನನ್ನು ಹಚ್ಚಬೇಡಿ. ಹಾವು ಕಚ್ಚಿದ ವ್ಯಕ್ತಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಕೊಡಿಸಿ. ನಾಟಿ ಔಷಧ ಅಥವಾ ಅಸುರಕ್ಷಿತ ಚಿಕಿತ್ಸಾ ಪದ್ದತಿಯನ್ನು ಅವಲಂಬಿಸಬೇಡಿ. ಒಟ್ಟಾರೆಯಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಸುತ್ತ-ಮುತ್ತಲಿನ ಪ್ರದೇಶ ಸ್ವಚ್ಛತೆಯಿಂದ ಇಟ್ಟುಕೊಂಡು ಇದರ ಬಗ್ಗೆ ಇತರರಿಗೂ ಮಾಹಿತಿ ನೀಡಿ, ಜಾಗೃತರಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ಸುರಕ್ಷಾಧಿಕಾರರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮದ ನಾಗರಿಕರು, ಗರ್ಭಿಣಿ ಬಾಣಂತಿಯರು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್