
ವಿಜಯಪುರ, 16 ಜುಲೈ (ಹಿ.ಸ.):
ಆ್ಯಂಕರ್ : ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಹಲವಾರು ಗ್ರಾಮಗಳಲ್ಲಿ ಜನರು ಮತ್ತು ಜಾನುವಾರುಗಳು ತೀವ್ರ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಲಾಲ್ ಬಹದ್ದೂರ್ ಶಾಸ್ತ್ರಿ (ಆಲಮಟ್ಟಿ) ಜಲಾಶಯದಿಂದ ಕೆರೆಗಳು ಹಾಗೂ ಕಾಲುವೆಗಳಿಗೆ ತಕ್ಷಣ ನೀರು ಹರಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಸವನ ಬಾಗೇವಾಡಿ ಶಾಸಕ ಹಾಗೂ ಮಾಜಿ ಸಚಿವ ಶಿವಾನಂದ ಪಾಟೀಲ ಅವರು ಸಲ್ಲಿಸಿದ್ದ ಮನವಿಗೆ ಸ್ಪಂದನೆ ದೊರೆತಿದ್ದು, ಇಂದು ಕಾಲುವೆಗಳಿಗೆ ನೀರು ಹರಿಸುವ ಕಾರ್ಯ ಆರಂಭವಾಗೊಂಡಿದ್ದು ಸ್ವಾಗತಾರ್ಹ ಎಂದು ಅವಳಿ ಜಿಲ್ಲೆಯ ರೈತರು ಅಭಿನಂದನೆ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿತ್ತು. ಜನರ ಜೊತೆಗೆ ಜಾನುವಾರುಗಳಿಗೂ ನೀರಿನ ಅಭಾವ ಉಂಟಾಗಿದ್ದರಿಂದ ಪರಿಸ್ಥಿತಿ ಆತಂಕಕಾರಿ ಹಂತ ತಲುಪಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು, ಆಲಮಟ್ಟಿ ಜಲಾಶಯದಿಂದ ತಕ್ಷಣ ಕೆರೆಗಳು ಮತ್ತು ಕಾಲುವೆಗಳಿಗೆ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಶಿವಾನಂದ ಪಾಟೀಲ ಮನವಿ ಮಾಡಿದ್ದರು.
ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದ್ದು, ಅದರಂತೆ ಇಂದು ಕಾಲುವೆಗಳಿಗೆ ನೀರು ಹರಿಸುವ ಕಾರ್ಯ ಆರಂಭಗೊಂಡಿದೆ. ಇದರಿಂದ ನೀರಿನ ಅಭಾವ ಎದುರಿಸುತ್ತಿದ್ದ ಗ್ರಾಮಗಳಿಗೆ ಶೀಘ್ರದಲ್ಲೇ ಪರಿಹಾರ ದೊರೆಯುವ ನಿರೀಕ್ಷೆ ಮೂಡಿದೆ.
ಈ ಕ್ರಮಕ್ಕೆ ಸಾರ್ವಜನಿಕರು, ರೈತರು ಹಾಗೂ ವಿವಿಧ ಸಂಘಟನೆಗಳು ಸಂತಸ ವ್ಯಕ್ತಪಡಿಸಿದ್ದು, ಶಾಸಕ ಶಿವಾನಂದ ಪಾಟೀಲ ಅವರು ಜನರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ ಸರ್ಕಾರದ ಗಮನ ಸೆಳೆದಿರುವುದನ್ನು ಮೆಚ್ಚಿಕೊಂಡಿದ್ದಾರೆ. ನೀರು ಕೆರೆಗಳಿಗೆ ತಲುಪಿದ ಬಳಿಕ ಅಂತರ್ಜಲ ಮಟ್ಟವೂ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ನೆರವಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯರು, ಬೇಸಿಗೆಯಂತಿರುವ ಪರಿಸ್ಥಿತಿಯಲ್ಲಿ ಸರ್ಕಾರ ಕೈಗೊಂಡಿರುವ ಈ ಕ್ರಮ ಜನರು ಹಾಗೂ ಜಾನುವಾರುಗಳಿಗೆ ದೊಡ್ಡ ಮಟ್ಟದ ನೆರವಾಗಲಿದ್ದು, ಮುಂದಿನ ದಿನಗಳಲ್ಲಿಯೂ ಅಗತ್ಯವಿರುವಷ್ಟು ನೀರು ನಿರಂತರವಾಗಿ ಹರಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande