
ವಿಜಯಪುರ, 16 ಜುಲೈ (ಹಿ.ಸ.)
ಆ್ಯಂಕರ್ : ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಕ್ಕಳಮೇಲಿ ಗ್ರಾಮದಲ್ಲಿರುವ ಐತಿಹಾಸಿಕ ಹಾಗೂ ಪುರಾತನ ಶಂಭುಲಿಂಗ ದೇವಸ್ಥಾನದಲ್ಲಿ ನಿಧಿಯಿದೆ ಎಂಬ ವದಂತಿಯನ್ನು ನಂಬಿದ ದುಷ್ಕರ್ಮಿಗಳು ದೇವಸ್ಥಾನದ ಆವರಣದಲ್ಲಿ ಅಕ್ರಮವಾಗಿ ಅಗೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯದಿಂದ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆಯಾಗಿದ್ದು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಹಿತಿಯ ಪ್ರಕಾರ, ದುಷ್ಕರ್ಮಿಗಳು ದೇವಸ್ಥಾನದ ಆವರಣದಲ್ಲಿದ್ದ ಬೃಹತ್ ನಂದಿ ವಿಗ್ರಹವನ್ನು ಚೈನ್ ಪುಲಿ ಬಳಸಿ ಸ್ಥಳಾಂತರಿಸಿ, ಅದರ ಕೆಳಭಾಗ ಸೇರಿದಂತೆ ಸುತ್ತಮುತ್ತಲಿನ ಕಲ್ಲುಗಳನ್ನು ತೆರವುಗೊಳಿಸಿ ಆಳವಾಗಿ ಅಗೆದಿದ್ದಾರೆ. ನಿಧಿ ಸಿಗುವ ನಿರೀಕ್ಷೆಯಲ್ಲಿ ಈ ಕೃತ್ಯ ಎಸಗಲಾಗಿದೆ ಎನ್ನಲಾಗಿದೆ. ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಸಿಂದಗಿ ಪೊಲೀಸ್ ಠಾಣೆಯ ಕ್ರೈಂ ವಿಭಾಗದ ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ರಾಮಸ್ಥರ ಆರೋಪದಂತೆ, ಕಳೆದ ಹಲವು ವರ್ಷಗಳಿಂದ ಇದೇ ದೇವಸ್ಥಾನವನ್ನು ಗುರಿಯಾಗಿಸಿಕೊಂಡು ನಿಧಿ ಕಳ್ಳರು ಪದೇ ಪದೇ ಅಕ್ರಮ ಅಗೆತ ನಡೆಸುತ್ತಿದ್ದು, ಕೆಲವು ಸ್ಥಳೀಯರ ಕೈವಾಡವೂ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಕುರಿತು ಈ ಹಿಂದೆ ಪೊಲೀಸ್ ಇಲಾಖೆಗೆ ಹಲವು ಬಾರಿ ಮೌಖಿಕ ಹಾಗೂ ಲಿಖಿತ ದೂರುಗಳನ್ನು ನೀಡಲಾಗಿತ್ತು. ಹಿಂದಿನ ಪಿಎಸ್ಐ ಆರೀಫ್ ಪುಶಾಪುರಿ ಹಾಗೂ ಈಗಿನ ಪಿಎಸ್ಐ ಶ್ರೀಕಾಂತ ಕಾಂಬಳೆ ಅವರ ಗಮನಕ್ಕೂ ವಿಷಯ ತರಲಾಗಿದ್ದರೂ, ಪರಿಣಾಮಕಾರಿ ಕ್ರಮ ಕೈಗೊಳ್ಳದ ಕಾರಣ ಮತ್ತೆ ಇಂತಹ ಘಟನೆ ಮರುಕಳಿಸಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಐತಿಹಾಸಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ಧಕ್ಕೆಯಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಕೃತ್ಯಗಳಿಂದ ಪುರಾತನ ದೇವಾಲಯಗಳ ಸಂರಕ್ಷಣೆ ಪ್ರಶ್ನಾರ್ಥಕವಾಗುತ್ತಿದ್ದು, ನಿಧಿ ಹುಡುಕುವ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಕಠಿಣ ಕ್ರಮ ಅಗತ್ಯವಾಗಿದೆ ಎಂದು ಒತ್ತಾಯಿಸಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಗ್ರಾಮಸ್ಥರು ಹಾಗೂ ದೇವಸ್ಥಾನದ ಭಕ್ತರು, ಶಂಭುಲಿಂಗ ದೇವಸ್ಥಾನದ ರಕ್ಷಣೆಗೆ ಹೋರಾಟ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಶೀಘ್ರದಲ್ಲೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದರ ಜೊತೆಗೆ, ಅಗತ್ಯವಿದ್ದರೆ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ದೇವಸ್ಥಾನಕ್ಕೆ ಹಾನಿ ಉಂಟುಮಾಡಿರುವ ದುಷ್ಕರ್ಮಿಗಳನ್ನು ತಕ್ಷಣ ಪತ್ತೆಹಚ್ಚಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ದೇವಸ್ಥಾನದ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ರಾತ್ರಿ ಪೊಲೀಸ್ ಗಸ್ತು ಹಾಗೂ ಪುರಾತನ ದೇವಾಲಯಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಸ್ತುತ ಪ್ರಕರಣದ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು, ತನಿಖೆಯ ಬಳಿಕ ವಾಸ್ತವಾಂಶಗಳು ಹಾಗೂ ಹೊಣೆಗಾರರ ಕುರಿತು ಸ್ಪಷ್ಟ ಚಿತ್ರಣ ಹೊರಬರಬೇಕಿದೆ. ಗ್ರಾಮಸ್ಥರು ಮಾತ್ರ ಐತಿಹಾಸಿಕ ಶಂಭುಲಿಂಗ ದೇವಸ್ಥಾನವನ್ನು ಉಳಿಸಲು ಅಧಿಕಾರಿಗಳು ತ್ವರಿತ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande