
ಕೋಲಾರ, ೧೬ ಜುಲೈ (ಹಿ.ಸ):
ಆ್ಯಂಕರ್ : ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆಯಿಲ್ಲದ, ಕಲಬೆರಕೆ ಆಹಾರ ಮಾರಾಟ ಮತ್ತು ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ ಉಲ್ಲಂಘನೆಗಳ ವಿರುದ್ಧ ಗುರುವಾರ ವಿವಿಧ ಇಲಾಖೆಗಳ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಪ್ರಕರಣಗಳನ್ನು ದಾಖಲಿಸಿ ದಂಡ ವಸೂಲು ಮಾಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಮನ್ವಯದೊಂದಿಗೆ ಈ ಅನಿರೀಕ್ಷಿತ ದಾಳಿ ನಡೆಸಲಾಯಿತು. ನಗರದ ವಿವಿಧೆಡೆ ತಪಾಸಣೆ ನಡೆಸಿದ ಅಧಿಕಾರಿಗಳ ತಂಡ, ಕಾಯ್ದೆ ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿದ್ದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದೆ.
ಕಾರ್ಯಾಚರಣೆ ವೇಳೆ ಕೇವಲ ದಂಡ ವಸೂಲಿಗೆ ಸೀಮಿತವಾಗದೆ, ಕಳಪೆ ಮಟ್ಟದ ಹಾಗೂ ಕಲಬೆರಕೆ ಆಹಾರ ಸೇವನೆ ಮತ್ತು ತಂಬಾಕು ಉತ್ಪನ್ನಗಳ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ಗಂಭೀರ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಲ್ಲಿ ಅಧಿಕಾರಿಗಳು ವ್ಯಾಪಕ ಜಾಗೃತಿ ಮೂಡಿಸಿದರು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಸ್ವಚ್ಛತೆ ಕಾಪಾಡುವಂತೆ ತಾಕೀತು ಮಾಡಿದರು.
ಈ ವಿಶೇಷ ಕಾರ್ಯಾಚರಣೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ ಪ್ರಭು ಎನ್. ಬಡಿಗೇರ್ , ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಂಕಿತ ಅಧಿಕಾರಿ ಡಾ. ರಾಕೇಶ್, ಪೊಲೀಸ್ ಇಲಾಖೆಯ ಸಹಾಯಕ ಪೊಲೀಸ್ ನಿರೀಕ್ಷಕ ವಿದ್ಯಾಧರ್, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹೆಗಾರ ಮಹಮದ್ ಪಿ., ಆಪ್ತ ಸಮಾಲೋಚಕ ಮಂಜುನಾಥ್ ಜಿ.ಎನ್. ಹಾಗೂ ಇಲಾಖೆಗಳ ಇತರ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್